ಗುರುವಾರ , ನವೆಂಬರ್ 21, 2019
24 °C

ಮೂರು ದಿನಗಳ ‘ಸಸ್ಯಸಂತೆ’ ಆರಂಭ

Published:
Updated:
Prajavani

ರಾಯಚೂರು: ಇಲ್ಲಿನ ಜಿಲ್ಲಾ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿರುವ ಮೂರುದಿನಗಳ ’ಸಸ್ಯಸಂತೆ’ ವಿನೂತನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಶುಕ್ರವಾರ ಉದ್ಘಾಟಿಸಿದರು.

ತೋಟಗಾರಿಕೆ ಕ್ಷೇತ್ರ ಹಾಗೂ ನರ್ಸರಿಗಳಲ್ಲಿ ಉತ್ಪಾದಿಸಲಾಗುತ್ತಿರುವ ಉತ್ಕೃಷ್ಟ ಗುಣಮಟ್ಟದ ವಿವಿಧ ತೋಟಗಾರಿಕೆ ಬೆಳೆಗಳ ಕಸಿ, ಸಸಿಗಳಾದ ಮಾವು, ತೆಂಗು, ನುಗ್ಗೆ, ಕರಿಬೇವು, ನಿಂಬೆ, ಅಲಂಕಾರಿಕ ಸಸಿಗಳು ಮತ್ತು ಇತರೆ ಸಸಿಗಳನ್ನು ಸಸ್ಯ ಸಂತೆಯಲ್ಲಿ ಮಾರಾಟ ಮಾಡಲಾಗುವುದು.

ಕಸಿ ಹಾಗೂ ಸಸಿಗಿಡಗಳನ್ನು ತೋಟಗಾರಿಕೆ ಇಲಾಖೆಯ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತೋಟಗಾರಿಗೆ ಇಲಾಖೆಯ ಉಪ ನಿರ್ದೇಶಕ ಮೊಹ್ಮದ್‌ ಅಲಿ ತಿಳಿಸಿದರು.

ಜಿಲ್ಲೆಯಲ್ಲಿರುವ ಲಿಂಗಸುಗೂರಿನ ಅಮರೇಶ್ವರ ತೋಟಗಾರಿಕೆ ಕ್ಷೇತ್ರ, ಲಿಂಗಸುಗೂರಿನ ತೋಟಗಾರಿಕೆ ಕ್ಷೇತ್ರ, ರಾಯಚೂರಿನ ರಾಘವೇಂದ್ರ ತೋಟಗಾರಿಕೆ ಕ್ಷೇತ್ರ, ಮಾನ್ವಿಯ ಸರ್ಕಾರಿ ಹಣ್ಣಿನ ತೋಟ, ಸಿರವಾರದ ತೋಟಗಾರಿಕೆ ಕ್ಷೇತ್ರ ಹಾಗೂ ದೇವದುರ್ಗದ ತೋಟಗಾರಿಕೆ ಕ್ಷೇತ್ರಗಳಲ್ಲೂ ತೆಂಗು, ಮಾವು, ನಿಂಬೆ, ಕರಿಬೇವು ಸೇರಿದಂತೆ ವಿವಿಧ ಬಗೆಯ ಸಸಿಗಳು ದೊರೆಯಲಿವೆ. ರೈತರು ಮತ್ತು ಸಾರ್ವಜನಿಕರು ಸಸಿಗಳನ್ನು ಖರೀದಿಸಬಹುದು ಎಂದು ಹೇಳಿದರು.

ಸಸ್ಯಸಂತೆಯಲ್ಲಿ ತೆಂಗು ಸಸಿಗೆ ₹60, ಮಾವು ₹30, ನಿಂಬೆ ₹10, ನುಗ್ಗೆ ₹8, ಕರಿಬೇವು ₹10 ದರದಲ್ಲಿ ಲಭ್ಯವಿದೆ. ನೂರಾರು ಬಗೆಯ ಅಲಂಕಾರಿಕ ಸಸಿಗಳು ಕೂಡಾ ಲಭ್ಯವಿದ್ದು, ಇಲಾಖೆ ದರದಲ್ಲಿ ಸಾರ್ವಜನಿಕರು ಖರೀದಿಸಬಹುದು.

ಹಿರಿಯ ಸಹಾಯಕ ನಿರ್ದೇಶಕರಾದ ಸುರೇಶಕುಮಾರ್‌, ಮಹೇಶ, ಹಾರ್ಟಿಕ್ಲಿನಿಕ್‌ ತಜ್ಞ ಅಮರೇಶ ಇದ್ದರು.

ಪ್ರತಿಕ್ರಿಯಿಸಿ (+)