ರಾಯಚೂರು: ದೇವರ ಹೆಸರಿನಲ್ಲಿ ಶಾಲಾ ಜಾಗ ಒತ್ತುವರಿ ಮಾಡಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಂಡು ದಸರಾ ಹಬ್ಬ ಬಳಿಕ ಪೊಲೀಸ್ ಬಂದೋಬಸ್ತ್ ನೊಂದಿಗೆ ಅಕ್ರಮ ಕಟ್ಟಡ ತೆರವುಗೊಳಿಸಿ ಶಾಲಾ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತಿಶ್ ಕೆ ತಿಳಿಸಿದರು.
‘ಸರ್ಕಾರಿ ಕನ್ನಡ ಶಾಲೆ ಉಳಿಸಿ ಹೋರಾಟ ಸಮಿತಿ’ ಪದಾಧಿಕಾರಿಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
‘ನಗರದ ಚಂದ್ರಬಂಡಾ ರಸ್ತೆಯ ಎಲ್‌ಬಿಎಸ್ ನಗರದ ಸಂತೋಷನಗರ ಬಡಾವಣೆಯಲ್ಲಿ ಅಲ್ಲಮಪ್ರಭು ಕಾಲೊನಿಯ ಸರ್ಕಾರಿ ಪ್ರೌಢ ಶಾಲೆಗಾಗಿ ಮೀಸಲಿರಿಸಿದ ಜಾಗದಲ್ಲಿ ಅಕ್ರಮವಾಗಿ ಟಿನ್‌ಶೆಡ್ ಹಾಕಿರುವ ಮಾಹಿತಿ ಇದೆ. ಅಕ್ರಮ ಕಟ್ಟಡ ತೆರವುಗೊಳಿಸಲು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚೆ ಮಾಡಲಾಗಿದೆ. ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಿದ್ದರೂ ಶಾಲೆಯ ಜಾಗ ಬಿಟ್ಟು ಕೊಡುವುದಿಲ್ಲ. ಆ ಜಾಗದಲ್ಲಿ ಶಾಲೆಯೇ ನಿರ್ಮಾಣವಾಗಲಿದೆ’ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.
ಶಾಲೆ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ ಕಳಸ, ಶಿವಕುಮಾರ ಯಾದವ್, ನರಸಿಂಹಲು ಮತ್ತಿತರರು ಮಾತನಾಡಿ, ನಾಗರಿಕ ಸೌಲಭ್ಯದ ಕೋಠಾದಡಿ ಸರ್ಕಾರಿ ಪ್ರೌಢ ಶಾಲೆಗೆ (ಕನ್ನಡ ಮಾಧ್ಯಮ) ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ ಎಂದು ತಿಳಿಸಿದರು.
‘ಶಾಲೆ ನಿರ್ಮಾಣಕ್ಕೆ ಒಂದೂವರೆ ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಶಿಕ್ಷಣ ಇಲಾಖೆ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಅವರ ಗಮನಕ್ಕೆ ತಂದಾಗ ಶಾಸಕ ಡಾ.ಶಿವರಾಜ ಪಾಟೀಲರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರೂ ಶಾಸಕರು ಮುತುವರ್ಜಿ ವಹಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ವರದಿ ಪ್ರಸ್ತಾಪ: ಶಾಲೆಯ ಜಾಗ ಒತ್ತುವರಿಯ ಕುರಿತು ಪ್ರಜಾವಾಣಿಯಲ್ಲಿ 2023ರ ಆಗಸ್ಟ್ 13 ರಂದು ಪ್ರಕಟವಾದ ‘ದೇವರ ಹೆಸರಲ್ಲಿ ಶಾಲಾ ಜಾಗ ಒತ್ತುವರಿ’ ಸೆಪ್ಟಂಬರ್ 29ರಂದು ಪ್ರಕಟವಾದ ‘ ಸಚಿವರ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳು’ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳ ನಿರಾಸಕ್ತಿ’ ಶಿರ್ಷಿಕೆ ಅಡಿಯಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಹೋರಾಟಗಾರರು ಜಿಲ್ಲಾಧಿಕಾರಿ ಯವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತಿಶ್ ಕೆ. ‘ನಾನು ರಾಯಚೂರು ಜಿಲ್ಲೆಗೆ ವರ್ಗಾವಾಗಿ ಬಂದ ಬಳಿಕ ಈ ವಿಷಯದ ಮಾಹಿತಿ ಪಡೆದಿರುವೆ. ಅಲ್ಲಿ ಶಾಲೆ ನಿರ್ಮಾಣ ಮಾಡುವುದು ನನ್ನ ಜವಾಬ್ದಾರಿ’ ಎಂದು ಭರವಸೆ ನೀಡಿದರು.
ಹೋರಾಟ ಸಮಿತಿಯ ಮುಖಂಡರಾದ ಅಶೋಕ ಕುಮಾರ ಜೈನ್, ಜಾನ್‌ವೆಸ್ಲಿ, ವೀರೇಶ್ ಹೀರಾ, ಶಿವಕುಮಾರ ಮ್ಯಾಗಳಮನಿ, ಎಸ್.ನರಸಿಂಹಲು ಕೆ.ರಂಗನಾಥ, ಇಮ್ರಾನ್ ಬಡೇಸಾಬ್, ಎನ್.ಆರ್.ರಮೇಶ, ಸಾದಿಕ್ ಪಾಷಾ, ಕೊಂಡಪ್ಪ, ಫಕ್ರುದ್ದೀನ್ ಅಲಿ, ಅಹ್ಮದ್, ಜಿ.ನರಸಿಂಹ, ಖಲೀಲ್ ಪಾಷಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.