ಭಾನುವಾರ, ಡಿಸೆಂಬರ್ 8, 2019
25 °C
ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಇಂದು

ಮಾನ್ವಿ | ಶಾಲಾ ಮಕ್ಕಳ ವಾಹನ; ಅಪಾಯಕ್ಕೆ ಆಹ್ವಾನ

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನಲ್ಲಿ ಪ್ರತಿ ದಿನ ಖಾಸಗಿ ವಾಹನಗಳು ಅಧಿಕ ಸಂಖ್ಯೆಯ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಮೂಲಕ ಮಕ್ಕಳ ಸುರಕ್ಷತೆಗೆ ಅಪಾಯವನ್ನು ಆಹ್ವಾನಿಸುತ್ತಿವೆ.

ಮಾನ್ವಿ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ನೂರಕ್ಕೂ ಅಧಿಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳಿವೆ. ಮಾನ್ವಿ ಪಟ್ಟಣಕ್ಕೆ ಸಮೀಪದ ವಿವಿಧ ಗ್ರಾಮಗಳಿಂದ ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಶಾಲೆಗಳು ಆರಂಭವಾಗುವ ಮತ್ತು ಬಿಡುವ ನಿಗದಿತ ಸಮಯಕ್ಕೆ ಅನುಗುಣವಾಗಿ ಕೆಲವು ಗ್ರಾಮಗಳಿಗೆ ಸಾರಿಗೆ ಬಸ್‌ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಖಾಸಗಿ ಟಂಟಂ, ಆಟೊ ವಾಹನಗಳನ್ನು ಅವಲಂಬಿಸಿದ್ದಾರೆ.

ಇದನ್ನೂ ಓದಿ: ಮಾನ್ವಿ | ಶಾಲಾ ವ್ಯಾನ್‌ಗೆ ಜೋತುಬಿದ್ದ ಮಗು: ಚಾಲಕನ ವಿರುದ್ಧ ಪ್ರಕರಣ ದಾಖಲು


ಖಾಸಗಿ ವಾಹನಗಳಲ್ಲಿ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

ಮಾನ್ವಿ ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಅನುದಾನ ರಹಿತ 17 ಪ್ರಾಥಮಿಕ ಹಾಗೂ 7 ಪ್ರೌಢಶಾಲೆಗಳು ಇವೆ. 10 ಖಾಸಗಿ ಶಾಲೆಗಳು ಸ್ವಂತ ಶಾಲಾ ವಾಹನಗಳನ್ನು ಹೊಂದಿವೆ. ಬಹುತೇಕ ಶಾಲಾ ವಾಹನಗಳು ಮಾನ್ವಿ ಪಟ್ಟಣದ ವಿವಿಧ ವಾರ್ಡ್‌ಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರಲು ಬಳಕೆಯಾಗುತ್ತವೆ.

ಶಾಲಾ ವಾಹನ ಇಲ್ಲದ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಗ್ರಾಮೀಣ ವಿದ್ಯಾರ್ಥಿಗಳು ಖಾಸಗಿ ಟಂಟಂ, ಆಟೊಗಳಲ್ಲಿ ಶಾಲೆಗೆ ಬರುತ್ತಾರೆ.

ಸರ್ಕಾರದ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಕೆಲವು ಖಾಸಗಿ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಪ್ರತಿ ದಿನ ಕರೆತರುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಪಾಲಕರು ಕೂಡ ಈ ಕುರಿತು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸದೆ, ಮಕ್ಕಳನ್ನು ಕೇವಲ ವಾಹನದಲ್ಲಿ ಕಳಿಸುವುದು ಮಾತ್ರ ತಮ್ಮ ಜವಾಬ್ದಾರಿ ಎಂಬಂತೆ ಭಾವಿಸಿರುವುದು ಕಂಡು ಬರುತ್ತಿದೆ. ಶಾಲಾ ಮಕ್ಕಳ ಸುರಕ್ಷತೆಗಾಗಿ ಖಾಸಗಿ ವಾಹನಗಳು ಹಾಗೂ ಶಾಲಾ ವಾಹನಗಳಿಗೆ ಸಾರಿಗೆ ಇಲಾಖೆಯ ಪರವಾನಗಿ ಮತ್ತು ಸಂಚಾರ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

ಮಾನ್ವಿ ಪಟ್ಟಣದಲ್ಲಿ ಈಚೆಗೆ ಖಾಸಗಿ ಶಾಲಾ ವಾಹನದ ಸ್ಟ್ಯಾಂಡ್‌ ಬೋರ್ಡ್‌ ಮೇಲೆ ವಿದ್ಯಾರ್ಥಿಯನ್ನು ನಿಲ್ಲಿಸಿಕೊಂಡು ಚಲಾಯಿಸಿದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ವಾಹನಗಳಲ್ಲಿ ತೆರಳುವ ಮಕ್ಕಳ ಸುರಕ್ಷತೆಗಾಗಿ ಡಿ.2ರಂದು ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆ ನಡೆಸಲು ಮುಂದಾಗಿದೆ.


ಖಾಸಗಿ ವಾಹನಗಳಲ್ಲಿ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

ಈ ಕುರಿತು ಸುತ್ತೋಲೆ ಹೊರಡಿಸಿರುವ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ವಾಹನ ಹೊಂದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಸುರಕ್ಷತೆಗಾಗಿ ಇರುವ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಅನುಭವಿ ಹಾಗೂ ಪರವಾನಗಿ ಹೊಂದಿರುವ ಚಾಲಕರ ನೇಮಕ, ಚಾಲಕರ ಮಾಹಿತಿಯನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಸಲ್ಲಿಸುವುದು, ವಾಹನದಲ್ಲಿ ಚಾಲಕರೊಂದಿಗೆ ಮಹಿಳಾ ಸಿಬ್ಬಂದಿ ಕಡ್ಡಾಯವಾಗಿ ಇರುವುದು, ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಡುವುದು, ವಾಹನಕ್ಕೆ ಜಿಪಿಆರ್‌ಎಸ್‌ ಕಡ್ಡಾಯವಾಗಿ ಅಳವಡಿಸುವುದು, ವಾಹನದಲ್ಲಿನ ಆಸನಗಳ ಸಂಖ್ಯೆಗೆ ತಕ್ಕಂತೆ ಮಕ್ಕಳು ಕೂಡಲು ಅವಕಾಶ ಕಲ್ಪಿಸುವುದು ಮುಂತಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು