ವೈಜ್ಞಾನಿಕತೆ ಬೆಳೆಸುವುದು ಎಲ್ಲರ ಜವಾಬ್ದಾರಿ

7
ಸಂಚಾಲಕರ ಸಬಲೀಕರಣ ಕಾರ್ಯಾಗಾರದಲ್ಲಿ ಬಿಜಿವಿಎಸ್‌ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಗೂಳಿ ಹೇಳಿಕೆ

ವೈಜ್ಞಾನಿಕತೆ ಬೆಳೆಸುವುದು ಎಲ್ಲರ ಜವಾಬ್ದಾರಿ

Published:
Updated:
Deccan Herald

ರಾಯಚೂರು: ಮೌಢ್ಯಗಳನ್ನು ಕಿತ್ತೆಸೆದು ವೈಜ್ಞಾನಿಕ ಮನೋಧರ್ಮ ಜನರಲ್ಲಿ ಬೆಳೆಸುವ ಮೂಲಕ ದೇಶದ ಪ್ರಗತಿಗೆ ಶ್ರಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಶ್ರೀಶೈಲ ಗೂಳಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ, ವಿಮುಕ್ತಿ ಚಾರಿಟೆಬಲ್ ಟ್ರಸ್ಟ್ ಹಾಗೂ ಆಕ್ಸ್‌ಫರ್ಡ್‌ ಕಾಲೇಜಿನಿಂದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ಆಂದೋಲನದ ನಿಮಿತ್ತ ಶನಿವಾರ ಆಯೋಜಿಸಿದ್ದ ಸಂಚಾಲಕರ ಸಬಲೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಹಾಗೂ ಸಂವಿಧಾನದ ಆಶಯಗಳನ್ನು ಗೌರವಿಸುವ ಪ್ರಗತಿಪರರು ದೇಶದಲ್ಲಿ ಬೆಳೆದು ನಿಂತಿರುವ ಮೌಢ್ಯಗಳು ಕಿತ್ತೆಸೆಯಬೇಕು. ದೇಶವನ್ನು ವೈಜ್ಞಾನಿಕ ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ತಿಳಿಸಿದರು.

ವೈಜ್ಞಾನಿಕ ಮನೋಧರ್ಮ ಎಂದರೆ ಪ್ರಯೋಗದ ಮೂಲಕ ತಾಳೆನೋಡಿ ಸತ್ಯಾಸತ್ಯತೆ ತಿಳಿದುಕೊಳ್ಳುವುದು. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಪ್ರತಿಯೊಂದು ಘಟನೆಗೂ ತಾಳೆ ಸಂಬಂಧ ಹುಡುಕುವ ಮೂಲಕ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಮೂಢನಂಬಿಕೆಗಳು ಭಯವನ್ನು ಬಿತ್ತಿ, ಬುದ್ಧಿಯನ್ನು ಶೂನ್ಯ ಮಾಡುತ್ತದೆ. ಆದ್ದರಿಂದ ಎಲ್ಲವನ್ನೂ ವಿವೇಚನೆಯಿಂದ ಚರ್ಚಿಸುವ ಮೂಲಕ ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಮೌಢ್ಯಾಚರಣೆಗಳನ್ನು ಆಚರಿಸುವ ಮೂಲಕ ಮುಗ್ದ ಜನರನ್ನು ಅಪಾಯಕಾರಿ ಜೀವನಕ್ಕೆ ತಳ್ಳಲಾಗುತ್ತಿದೆ. ಯುವಜನರು ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಚಾಲಕ ಸೈಯದ್ ಹಫೀಜುಲ್ಲಾ ಮಾತನಾಡಿ, ವೈಜ್ಞಾನಿಕ ಮನೋವೃತ್ತಿ ಆಂದೋಲನದ ಭಾಗವಾಗಿ 50 ಜನಕ್ಕೆ ತರಬೇತಿ ನೀಡಲಾಗುತ್ತಿದೆ. ಈ 50 ಜನರಿಂದ 50 ಕಡೆ ಪವಾಡ ಬಯಲು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಲಾಗುತ್ತದೆ ಎಂದು ಹೇಳಿದರು.

ಸಿಐಟಿಯುನ ಎಚ್.ಪದ್ಮಾ, ಲಕ್ಷ್ಮೀರೆಡ್ಡಿ ಹಾಗೂ ಕಾರ್ಯಕರ್ತರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !