ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜೋತ್ಪಾದಕರು ಸಂಘಟಿತರಾಗಿ: ಎಸ್‌.ಎಂ.ಸಿದ್ದಾರೆಡ್ಡಿ

ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿಂಗಾರು ಬೀಜ ದಿನೋತ್ಸವ
Last Updated 25 ಸೆಪ್ಟೆಂಬರ್ 2021, 13:39 IST
ಅಕ್ಷರ ಗಾತ್ರ

ರಾಯಚೂರು: ಬೀಜೋತ್ಪಾದಕರು ಸಂಘಟಿತರಾಗುವುದು ಮುಖ್ಯ. ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಸರ್ಕಾರದಿಂದ ಈಚೆಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಬೀಜೋತ್ಪಾದಕ ರೈತ ಎಸ್‌.ಎಂ.ಸಿದ್ದಾರೆಡ್ಡಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಖಿಲ ಭಾರತ ಸಂಯೋಜಿತ ಸಂಶೋಧನಾ–ಬೀಜಗಳು ಹಾಗೂ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದಿಂದ ಶನಿವಾರ ಏರ್ಪಡಿಸಿದ್ದ ಹಿಂಗಾರು ಬೀಜ ದಿನೋತ್ಸವ–2021 ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೀಜಗಳ ಕುರಿತು ಸಂಶೋಧನೆ ಹಾಗೂ ವಿಸ್ತರಣೆ ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಹೊಸ ತಳಿಗಳು ಈ ಭಾಗಕ್ಕೆ ಹೊಂದಾಣಿಕೆ ಆಗುತ್ತವೆಯೋ ಇಲ್ಲವೋ ಎಂಬುದರ ಸಂಶೋಧನೆ ಆಗಬೇಕು. ಈ ಬಗ್ಗೆ ಕೃಷಿ ವಿಜ್ಞಾನಿಗಳೊಂದಿಗೂ ಮಾತನಾಡಿದ್ದೇನೆ ಎಂದರು.

ರಾಯಚೂರಿನಲ್ಲಿ ಕೃಷಿ ವಿಜ್ಞಾನಿಗಳು ಜೆಜೆ–11 ಕಡಲೆ ಬೀಜಗಳನ್ನೇ ರೈತರಿಗೆ ಕೊಡುತ್ತಿದ್ದಾರೆ. ಇದನ್ನು ಕೈಬಿಡುವಂತೆ ಸಲಹೆ ನೀಡಿದ್ದೇನೆ. ಸಾಕಷ್ಟು ಹೊಸ ತಳಿಗಳು ಬಂದಿದ್ದು, ಅವುಗಳನ್ನು ಜಿಲ್ಲೆಯಲ್ಲಿ ಪ್ರಯೋಗಿಸಬೇಕು. ಕಡಲೆ, ಹೆಸರು, ಉದ್ದು ಹಾಗೂ ಅಲಸಂದೆ ಬೀಜಗಳಿಗೆ ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರವು ₹3,700 ಸಹಾಯಧನ ನೀಡುತ್ತಿದೆ. ಬೀಜೋತ್ಪಾದಕರಿಗೆ ಮೊದಲು ಹೆಚ್ಚು ಲಾಭ ಆಗಿದೆ. ರಾಯಚೂರು ಜಿಲ್ಲೆಯ ಬೀಜೋತ್ಪಾದಕರಲ್ಲಿ ಸಂಘಟನೆಯಿಲ್ಲ. ಹೀಗಾಗಿ ಎರಡು ವರ್ಷಗಳಿಂದ ಲಾಭ ಸಾಧ್ಯವಾಗಿಲ್ಲ ಎಂದು ಹೇಳಿದರು.

ನವಕರ್ನಾಟಕ ಪ್ರಮಾಣಿತ ಬೀಜ ಉತ್ಪಾದಕರ ಸಂಘ ಎಂದು ಹೊಸದಾಗಿ ಅಸ್ತಿತ್ವಕ್ಕೆ ಬರಲಾಗಿದೆ. ರಾಷ್ಟ್ರೀಯ ಬೀಜ ನಿಗಮದಿಂದ ತೊಗರಿ ಬೀಜ ಉತ್ಪಾದಕರಿಗೆ ಸುಮಾರು ₹1 ಕೋಟಿ ಲಾಭ ಸಿಕ್ಕಿಲ್ಲ. ಸೌಲಭ್ಯ ವಂಚಿತರಾದ ಬೀಜೋತ್ಪಾದಕ ರೈತರು ಒಗ್ಗಟ್ಟಾದರೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ವಿಜ್ಞಾನ ಸಾಕಷ್ಟು ಬೆಳವಣಿಗೆ ಆಗಿದೆ. ಮುಂಗಾರು, ಹಿಂಗಾರು ಆರಂಭದಲ್ಲಿ ರೈತರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶಕ್ಕಾಗಿ ಬೀಜ ದಿನೋತ್ಸವ ಕಾರ್ಯಕ್ರಮಗಳನ್ನು 2009 ರಲ್ಲಿ ದೇಶದಲ್ಲಿ ಮೊದಲಬಾರಿ ಆರಂಭಿಸಲಾಗಿದೆ. ಬೀಜಗಳ ಪ್ರದರ್ಶನ ಏರ್ಪಡಿಸಿ ರೈತರೊಂದಿಗೆ ಸಂವಾದ ನಡೆಸಬೇಕು ಎಂದರು.

ಕೋವಿಡ್‌ ಕಾಲದಲ್ಲಿ ಕೃಷಿಗೆ ಅಷ್ಟೊಂದು ಪರಿಣಾಮ ಬೀರಿಲ್ಲ. ರೈತರ ಆದಾಯ ದ್ವಿಗುಣವಾಗಲು ಕೃಷಿ ವೆಚ್ಚ ತಗ್ಗಿಸುವುದು ಮುಖ್ಯ. ಬಿತ್ತನೆಗೂ ಮೊದಲು ರೈತರು ಸಮಗ್ರ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಒಂದು ಮನೆಯಲ್ಲಿ ಇಬ್ಬರಿಗಿಂತ ಹೆಚ್ಚು ಸದಸ್ಯರಿದ್ದಾಗ, ಎಲ್ಲರೂ ಬೇರೆಬೇರೆ ಉದ್ಯೋಗಗಳನ್ನು ಆಯ್ದುಕೊಳ್ಳುತ್ತಾರೆ. ಅದೇ ರೀತಿ ಕೃಷಿಯಲ್ಲಿಯೂ ಬೇರೆಬೇರೆ ಬೆಳೆಗಳನ್ನು, ಹೈನುಗಾರಿಕೆ, ಕೋಳಿ ಸಾಕಾಣಿಕೆ ಇತ್ಯಾದಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ ಮಾತನಾಡಿ, ವಿಶ್ವವಿದ್ಯಾಲಯ ಇರುವುದೇ ರೈತರಿಗಾಗಿ. ಮೇ 25 ಮುಂಗಾರು ಬೀಜ ದಿನೋತ್ಸವ ಹಾಗೂ ಸೆಪ್ಟೆಂಬರ್‌ 25 ಹಿಂಗಾರು ಬೀಜ ದಿನೋತ್ಸವವನ್ನು ಹಬ್ಬದ ರೀತಿಯಲ್ಲಿ ಎಲ್ಲ ವಿಜ್ಞಾನ ಕೇಂದ್ರಗಳಲ್ಲೂ ಆಚರಿಸಲಾಗುವುದು. ಕೃಷಿ ಲಾಭದಾಯಕ ಮಾಡುವುದು ಎಲ್ಲರ ಗುರಿ. ಕೃಷಿಗೆ ಸರ್ಕಾರ ಕೂಡಾ ಬಹಳ ಪ್ರಾಮುಖ್ಯತೆ ನೀಡುತ್ತಿದೆ ಎಂದರು.

ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಗುರುರಾಜ ಸುಂಕದ, ಕೃಷಿ ವಿಜ್ಞಾನಿಗಳಾದ ಡಾ.ಅರುಣಕುಮಾರ ಹೊಸಮನಿ, ಡಾ.ಎಂ.ಭೀಮಣ್ಣ, ರೈತ ಮಲ್ಲನಗೌಡ, ಲಿಂಗಪ್ಪ ಮಾತನಾಡಿದರು.

ರಾಯಚೂರು ತಾಲ್ಲೂಕು ಹುಣಸೆಹಾಳ ಹುಡಾ ಗ್ರಾಮದ ಉತ್ತಮ ಬೀಜ ಬೆಳೆಗಾರ ವೆಂಕಟೇಶ ಎಚ್‌. ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ಪ್ರಭು ತುರಾಯಿ, ರಾಷ್ಟ್ರೀಯ ಬೀಜ ನಿಗಮದ ವಲಯ ವ್ಯವಸ್ಥಾಪಕ ಚಂದನ್‌ ಎನ್‌.ಎಂ., ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪ್ರಹ್ಲಾದ್‌ ಉಭಾಳೆ ಇದ್ದರು.

ಉಮೇಶ ಹಿರೇಮಠ ಸ್ವಾಗತಿಸಿದರು. ಅಮರೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT