ಬುಧವಾರ, ಆಗಸ್ಟ್ 4, 2021
21 °C
ಜಿಲ್ಲೆಯಲ್ಲಿ ಸ್ವಯಂ ಜಾಗೃತಿಯೊಂದೆ ಸೋಂಕು ತಡೆಗೆ ಆಸ್ತ್ರ

ರಾಯಚೂರು: ಕೋವಿಡ್‌ ಸಾವು ಸಾಮಾನ್ಯವಾಗುತ್ತಿದೆ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ಐದು ಜನರು ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಮೃತಪಟ್ಟವರೆಲ್ಲ ಇತರೆ ರೋಗಗಳಿಂದ ಬಳಲುತ್ತಿದ್ದರು ಎಂಬುದನ್ನು ತಜ್ಞ ವೈದ್ಯರ ತಂಡವು ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿಗಳಲ್ಲಿ ಉಲ್ಲೇಖಿಸಿದೆ. ಹೃದ್ರೋಗ, ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಉಸಿರಾಟ ತೊಂದರೆ ಹಾಗೂ ಕಾಮಾಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕು ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಎಂಟು ವರ್ಷದ ಮಗು ಹಾಗೂ ಅನಾರೋಗ್ಯ ಪೀಡಿತ 60 ವರ್ಷದ ವ್ಯಕ್ತಿ ಕೂಡಾ ಮೃತರಾಗಿದ್ದಾರೆ. ಹೀಗಾಗಿ ಅನಾರೋಗ್ಯ ಇದ್ದವರೆಲ್ಲರೂ ಸ್ವಯಂ ಜಾಗೃತಿ ವಹಿಸುವುದು ಅನಿವಾರ್ಯ ಎಂಬುದು ಸಾವಿನ ಪ್ರಕರಣಗಳು ಮನವರಿಕೆ ಮಾಡುತ್ತಿವೆ.

ಆತಂಕವಿಲ್ಲ: ಕೋವಿಡ್‌ ಮಾರಣಾಂತಿಕವಲ್ಲ ಎಂಬುದು ಈಚೆಗೆ ಜನರಿಗೆ ಗೊತ್ತಾಗಿದ್ದು, ಇದೇ ಕಾರಣದಿಂದ ಮುನ್ನಚ್ಚರಿಕೆ ವಹಿಸದೆ ಸಂಚರಿಸುವುದು ಹೆಚ್ಚಳವಾಗುತ್ತದೆ. ಗುಂಪಾಗಿ ನಿಲ್ಲುವುದನ್ನು ಪ್ರಶ್ನಿಸುವವರಿದ್ದಾರೆ. ವಾಸ್ತವದಲ್ಲಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಪಾಲನೆ ಎಲ್ಲಿಯೂ ಆಗುತ್ತಿಲ್ಲ. ಕೋವಿಡ್‌ ದೃಢವಾದರ ಪೈಕಿ ಶೇ 80 ರಷ್ಟು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವುದು ಜನರಲ್ಲಿನ ಆತಂಕ ದೂರ ಮಾಡಿದೆ.

ಕಾಳಜಿ ಅಗತ್ಯ: ಅನಾರೋಗ್ಯದಿಂದ ಬಳಲುವ ಜನರ ಹಿತದೃಷ್ಟಿಯಿಂದಾದರೂ ಆರೋಗ್ಯವಂತ ಜನರು ಎಚ್ಚರ ವಹಿಸಬೇಕಾಗಿದೆ. ಅನಾರೋಗ್ಯವಂತರಲ್ಲಿಗೆ ಆರೋಗ್ಯವಂತರೆ ಸೋಂಕು ತೆಗೆದುಕೊಂಡು ಹೋಗುವ ಅಪಾಯ ಹೆಚ್ಚಾಗಿದೆ. ವಯೋವೃದ್ಧರು, ಮಕ್ಕಳು, ಅನಾರೋಗ್ಯಪೀಡಿತರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ಜೀವ ಉಳಿಸಲು, ಎಲ್ಲರೂ ಸೋಂಕು ತಡೆ ಮುನ್ನಚ್ಚರಿಕೆ ಪಾಲನೆ ಮಾಡಬೇಕಾಗಿದೆ. ಸ್ವಯಂ ನಿಯಂತ್ರಣ ಹಾಕಿಕೊಂಡು ಮುನ್ನಚ್ಚರಿಕೆ ವಹಿಸಬೇಕಿದೆ. ಮಾಸ್ಕ್‌ ಧರಿಸುವುದು, ಸ್ಯಾನಿಟೈಜರ್ ಬಳಕೆ ಮಾಡುವುದು; ಇನ್ನೊಬ್ಬರ ಜೀವ ಉಳಿಸುವುದಕ್ಕಾಗಿ ಎನ್ನುವ ಕಾಳಜಿ ಬರಬೇಕಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು