ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆಯಾದ ಸಂಘ

ಮಂಗಳವಾರ, ಮಾರ್ಚ್ 26, 2019
27 °C
ಹೊನ್ನಹಳ್ಳಿ ಸ್ವಸಹಾಯ ಗುಂಪಿನ ರೊಟ್ಟಿ ದುಬೈಗೆ ರವಾನಿಸುವುದು ವಿಶೇಷ

ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆಯಾದ ಸಂಘ

Published:
Updated:
Prajavani

ಲಿಂಗಸುಗೂರು: ತಾಲ್ಲೂಕು ಕೇಂದ್ರದಿಂದ 8 ಕಿ.ಮೀ ಅಂತರದಲ್ಲಿರುವ ಹೊನ್ನಹಳ್ಳಿ ಗ್ರಾಮದ ಈಶ್ವರ ಮಹಿಳಾ ಸ್ವಸಹಾಯ ಸಂಘವು ಸಂಕಷ್ಟದ ಬದುಕು ನಡೆಸುತ್ತಿದ್ದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯಾಗಲು ಪ್ರೇರಣೆಯಾಗಿ ನಿಂತಿದೆ.

ಎರಡು ದಶಕಗಳಿಂದ ಗ್ರಾಮ್ಸ್‌, ಸೃಷ್ಟಿ, ಮಂಜುನಾಥ, ಲಕ್ಷ್ಮೀ ವೆಂಕಟೇಶ್ವರ ಹೀಗೆ ವಿವಿಧ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಲ್ಲಿ ಮಹಿಳೆಯರ ಸ್ವಹಾಯ ಗುಂಪುಗಳ ರಚನೆ ಮಾಡಿದ್ದರು. ಸಂಸ್ಥೆಗಳು ನೀಡುವ ಆರ್ಥಿಕ ಸಹಾಯಗಳ ಸೌಲಭ್ಯ ನೀಡುವಲ್ಲಿ ಮುಂಚೂಣಿಯಲ್ಲಿದ್ದ ಗ್ರಾಮದ ತೋಟಮ್ಮ ಅಮರಗುಂಡಯ್ಯ ಸಂತೆಕೆಲ್ಲೂರುಮಠ ಎಲ್ಲರಿಗೂ ಬೆನ್ನೆಲುಬಾಗಿ ನಿಂತಿದ್ದಾರೆ.

ಸರ್ಕಾರೇತರ ಸಂಸ್ಥೆಗಳಲ್ಲಿ ₹ 500 ರಿಂದ ₹3000 ವೇತನಕ್ಕೆ ದುಡಿಯುತ್ತಿದ್ದ ತೋಟಮ್ಮ ಐದು ವರ್ಷಗಳ ಹಿಂದೆ 20 ಮಹಿಳೆಯರೊಂದಿಗೆ ಈಶ್ವರ ಮಹಿಳಾ ಸ್ವಸಹಾಯ ಸಂಘದಡಿ ಮಂಜುನಾಥ ರೊಟ್ಟಿ ಕೇಂದ್ರ ಆರಂಭಿಸಿದರು. ಈ ಮೂಲಕ 20 ಕುಟುಂಬಗಳಿಗೆ ಉದ್ಯೋಗ ಸೃಷ್ಠಿಸುವ ಜೊತೆಗೆ ಕುಟುಂಬಗಳ ನಿರ್ವಹಣೆ ಆಶಾಕಿರಣವಾಗಿದ್ದಾರೆ.

‘ನಾವು ಕೇಂದ್ರಕ್ಕೆ ರೊಟ್ಟಿ ಮಾಡಿ ಕೊಡುವ ಜೊತೆಗೆ ವೈಯಕ್ತಿಕವಾಗಿ ಕೂಡ ಮಾರಾಟ ಮಾಡುತ್ತೇವೆ. ದುಬೈದಲ್ಲಿ ಕೆಲಸ ಮಾಡುವ ನೌಕರರು ನಮ್ಮ ಕೇಂದ್ರದಿಂದ ವರ್ಷದಲ್ಲಿ  ಬಾರಿ ರೊಟ್ಟಿ ಖರೀದಿಸಿ ಒಯ್ಯುತ್ತಾರೆ. ಜೊತೆಗೆ ಗ್ರಾಮದಾದ್ಯಂತ ಬಹುತೇಕರು ರೊಟ್ಟಿ ಮಾರಾಟ ಮಾಡುತ್ತಿದ್ದಾರೆ’ ಎಂದು ಈಶ್ವರ ಸಂಘದ ಸದಸ್ಯೆ ಶಾಂತಮ್ಮ ಬಸವರಾಜ ಹೇಳಿದರು.

‘ಕೃಷಿ ಕೂಲಿ ಕಾರ್ಮಿಕರಾಗಿದ್ದು ಹೊಲ ಮನೆಗಳಲ್ಲಿ ಕೆಲಸ ಇಲ್ಲದಾಗ ಕುಟುಂಬ ನಿರ್ವಹಣೆಗೆಂದು ಈಶ್ವರ ಸಂಘದಡಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ಮಾಡಿ ಕೊಡುತ್ತೇವೆ. ಕೇಂದ್ರದವರು ತಮಗೆ ಒಂದು ಶೇರ್‌ಗೆ 25 ರೊಟ್ಟಿ ಮಾಡಿಕೊಟ್ಟರೆ ₹ 50 ಕೂಲಿ ನೀಡುತ್ತಾರೆ. ದಿನಕ್ಕೆ 4 ರಿಂದ 5 ಶೇರು ಹಿಟ್ಟಿನ ರೊಟ್ಟಿ ಬಡೆಯುತ್ತೇವೆ. ಪರಸ್ಪರ ಹೊಂದಾಣಿಕೆ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದೇವೆ’ ಎಂದು ರಾಜೇಶ್ವರಿ ಶೇಖರಯ್ಯ, ಅಂಬಮ್ಮ ಶಂಕರಪ್ಪ ಅವರು ಹೇಳುವ ಮಾತಿದು.

‘ವರ್ಷಕ್ಕೆ 3 ರಿಂದ 4ಕ್ವಿಂಟಾಲ್‌ ಬಿಳಿಜೋಳ–ಸಜ್ಜೆ ಖರ್ಚಾಗುತ್ತದೆ. ಮದುವೆ, ಮುಂಜುವೆ, ಗೃಹ ಪ್ರವೇಶಗಳು ಸೇರಿದಂತೆ ಹೊಟೆಲ್‌, ದಾಬಾಗಳಿಗೆ ಅಂದಾಜು ₹15 ರಿಂದ ₹20ಸಾವಿರ ರೊಟ್ಟಿಗಳನ್ನು ಪೂರೈಸುತ್ತೇವೆ. ದುಬೈ ಸೇರಿದಂತೆ ಸುತ್ತಮುತ್ತಲಿನ ಹಟ್ಟಿ, ಗುರುಗುಂಟಾ, ಸಿರಗುಪ್ಪ, ಅಮರೇಶ್ವರ, ಶಕ್ತಿನಗರ, ಬೆಂಗಳೂರು, ಸುರಪುರ ಸೇರಿದಂತೆ ಇತರೆಡೆಗಳಿಗೆ ರೊಟ್ಟಿ ಕಳುಹಿಸಿದ್ದೇವೆ’ ಎಂದು ಅಧ್ಯಕ್ಷೆ ತೋಟಮ್ಮ ಅನುಭವ ಹಂಚಿಕೊಂಡರು.

‘ಮಂಜುನಾಥ ರೊಟ್ಟಿ ಕೇಂದ್ರ ಆರಂಭಗೊಂಡ ನಂತರದಲ್ಲಿ ಗ್ರಾಮದ ಬಹುತೇಕ ಕುಟುಂಬಗಳ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಆಗಿದೆ. ತಾವು ಕೂಡ ಮನೆ ನಿರ್ಮಿಸಿಕೊಂಡಿದ್ದು, ಒಂದು ಕಾರು ಖರೀದಿಸಿ ವ್ಯವಹಾರಕ್ಕೆ ಹೋಗುತ್ತಿರುವೆ. ನಮ್ಮ ಕೇಂದ್ರದ ವ್ಯಾಪಾರ ಕಂಡ ಬಹುತೇಕ ಮಹಿಳೆಯರು ರೊಟ್ಟಿ ಮಾರಾಟ ಮಾಡುತ್ತಿದ್ದು ಹೊನ್ನಹಳ್ಳಿ ರೊಟ್ಟಿ ತಯಾರಿಕೆಯ ಮಿನಿ ಕಾರ್ಖಾನೆಯಾಗಿದೆ’ ಎಂದು ತಿಳಿಸಿದರು.

‘ಈಶ್ವರ ಮಹಿಳಾ ಸ್ವಸಹಾಯ ಸಂಘದವರು ರೊಟ್ಟಿ ವ್ಯಾಪಾರದ ಜೊತೆಗೆ ಹೈನುಗಾರಿಕೆ, ಹಿಟ್ಟಿನ ಗಿರಣಿ, ಬಟ್ಟೆ ವ್ಯಾಪಾರ, ಕಿರಾಣಿ, ಸ್ಟೇಷನರಿಯಂತ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಮಂಜುನಾಥ ಮತ್ತು ಲಕ್ಷ್ಮೀ ವೇಂಕಟೇಶ್ವರ ಸಂಸ್ಥೆಯವರು ಆರ್ಥಿಕ ನೆರವು ನೀಡಿದ್ದು ಸರ್ಕಾರ ತಮಗೆ ಯಾವುದೇ ಆರ್ಥಿಕ ಸಹಾಯಕ್ಕೆ ಮುಂದೆ ಬಂದಿಲ್ಲ’ ಎಂದು ತೋಟಮ್ಮ ಸರ್ಕಾರಿ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !