ಭಾನುವಾರ, ನವೆಂಬರ್ 1, 2020
19 °C
ವಿಶ್ವ ಹಿರಿಯ ನಾಗರಿಕರ ದಿನಚರಣೆ

ಹಿರಿಯರು ಸಮಾಜದ ಸಂಪತ್ತು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಸಮಾಜದಲ್ಲಿ ಹಿರಿಯ ನಾಗರಿಕರನ್ನು ಗೌರವಿಸುವುದು ಸಂಸ್ಕೃತಿ, ಸಂಪ್ರದಾಯದ ಭಾಗವಾಗಿದೆ. ಹಿರಿಯರನ್ನು ಯುವ ಸಮುದಾಯವು ಗೌರವದಿಂದ ಕಾಣಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಹಿರಿಯ ನಾಗರಿಕರಿಗೆ ರಕ್ಷಣೆ ಮತ್ತು ಗೌರವ ದೊರಕುತ್ತಿಲ್ಲ. ಹಿರಿಯರನ್ನು ಕಡೆಗಣಿಸುವಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದು ಆರೋಗ್ಯಕರ ಸಮಾಜದ ಲಕ್ಷಣವಲ್ಲ ಎಂದು ಹೇಳಿದರು.

ಸಮಾಜಕ್ಕೆ ಹಾಗೂ ಮನೆಗಳಿಗೆ ಹಿರಿಯ ನಾಗರಿಕರೇ ಆಸ್ತಿ. ಅವರ ಜೀವನಾನುಭವವು ಹೊಸ ಪೀಳಿಗೆ ಜೀವನಕ್ಕೆ ದಾರಿ ದೀಪವಾಗುತ್ತದೆ. ಹಿರಿಯರನ್ನು ಉತ್ತಮವಾಗಿ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ. ಹಿರಿಯರನ್ನು ಮನೆಯಿಂದ ಹೊರಹಾಕದೇ ಗೌರವದಿಂದ ಕಾಣಬೇಕು ಎಂದು ಹೇಳಿದರು.

ಕೋವಿಡ್-19 ಸೋಂಕು ನಿತ್ಯವೂ ಹರಡುತ್ತಿದ್ದು, ಹಿರಿಯರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಹೋಗಬಾರದು, ವಯೋವೃದ್ಧರು ಮನೆಯಲ್ಲಿಯೇ ಇದ್ದು ಕಾಲಕಾಲಕ್ಕೆ ಬಿಸಿನೀರು, ಕಷಾಯ ಸೇವಿಸಿ ಆರೋಗ್ಯ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ ಮಾತನಾಡಿ, ಹಿರಿಯರ ಮೇಲೆ ಅಮಾನವೀಯ ಕೃತ್ಯವೆಸಗುವ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಶಾಲಾ ಕಾಲೇಜುಗಳಲ್ಲಿ ನೈತಿಕ ಮೌಲ್ಯ ಬೆಳೆಸುವ ಕುರಿತ ಪಠ್ಯಗಳು ಆರಂಭಗೊಂಡಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲೂ ಪಿಂಚಣಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ. ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆಯಡಿ, ದೂರು ಸಲ್ಲಿಸಿದರೆ ನ್ಯಾಯ ದೊರಕಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಕರಿಯಪ್ಪ ಮಾಸ್ತರ್ ಮತ್ತಿತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.