ಭಾನುವಾರ, ಮಾರ್ಚ್ 7, 2021
31 °C
ಕಾಶಿ ಸ್ವಾಮೀಜಿ ಕರೆ

ಸನ್ನಿಧಿಗಳ ನಡೆ ರೈತರ ಕಡೆ ಸೆ.10ಕ್ಕೆ ಸಮಾರೋಪ:ಬಾರಕೋಲು ಸಮೇತ ಬರಲು ರೈತರಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಲಿಂಗಸುಗೂರು: ‘ವಿಶ್ವಕ್ಕೆ ಆಹಾರ ನೀಡುವ ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತ ಬಂದಿದ್ದರು ಕೂಡ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಅಂತೆಯೆ ಸೆಪ್ಟಂಬರ್‌ 10ರ ಸಮಾರೋಪ ಸಮಾರಂಭದಲ್ಲಿ ರೈತರು ಬಾರಕೋಲು ಸಮೇತ ಭಾಗವಹಿಸಬೇಕು’ ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಶುಕ್ರವಾರ ಯರಡೋಣ ಗ್ರಾಮದಲ್ಲಿ ಸನ್ನಿಧಿಗಳ ನಡೆ ರೈತರ ಕಡೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ನಾಲ್ಕು ದಶಕಗಳ ಅವಧಿಯಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಅನುಷ್ಠಾನ ಮಾಡುತ್ತ ಬಂದಿದ್ದೇವೆ. ಆದರೆ, ಪ್ರಸಕ್ತ ವರ್ಷದ ಶ್ರಾವಣ ರೈತರ ಕಲ್ಯಾಣಕ್ಕಾಗಿ ಪ್ರವಚನ ಅನುಷ್ಠಾನ ಹಮ್ಮಿಕೊಂಡಿದ್ದು ಆ ದೇವರು ತಮಗೆ ಶುಭವನ್ನುಂಟುಮಾಡಲಿ’ ಎಂದು ಹಾರೈಸಿದರು.

‘ನಾರಾಯಣಪುರ ಬಲದಂಡೆ, ರಾಂಪೂರ ಏತ ನೀರಾವರಿ ಯೋಜನೆಗಳ ನಾಲೆಗಳ ಅಧುನೀಕರಣ, ನನೆಗುದಿಗೆ ಬಿದ್ದ ವಿವಿಧ ಏತ ನೀರಾವರಿ ಯೋಜನೆಗಳ ಪುನಶ್ಚೇತನಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಮುಂದಾಗಬೇಕು. ಅನ್ನ ನೀಡುವ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಶೇಷ ಆಯೋಗ ರಚಿಸಬೇಕು. ವಿಷಯುಕ್ತ ಆಹಾರ ಬೆಳೆಯದೆ ಸಾವಯವ ಕೃಷಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಮಾತನಾಡಿ, ‘ಕೆಲ ವರ್ಷಗಳಿಂದ ನಿರಂತರ ವಿದ್ಯುತ್‌, ಜಮೀನುಗಳಿಗೆ ಸಮರ್ಪಕ ನೀರಾವರಿ ಸೌಲಭ್ಯ, ಸಾಲಮನ್ನಾದಂತ ಹೋರಾಟ ನಡೆಸುತ್ತ ಬಂದಿದ್ದೇವೆ. ಸರ್ಕಾರದ ಇಬ್ಬಗೆ ನೀತಿಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಶಿ ಸ್ವಾಮೀಜಿ ಅವರು ರೈತ ಪರ ಕಾರ್ಯಕ್ರಮ ಆಯೋಜಿಸಿದ್ದು ಸ್ವಾಗತಾರ್ಹ’ ಎಂದು ಪ್ರಶಂಸಿಸಿದರು.

ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯ ಸ್ವಾಮೀಜಿ, ಯರಡೋಣಿ ಕ್ರಾಸ್‌ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಸಿದ್ಧಾಂತ ಶಿಖಾಮಣಿ ಪ್ರವಚನದ ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತ ರೈತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ಕಾಶಿ ಸ್ವಾಮೀಜಿ ಅವರ ನಡೆ ತಮಗೆಲ್ಲ ಖುಷಿ ತಂದಿದೆ. ಸನ್ನಿಧಿಗಳ ನಡೆ ಕಾರ್ಯಕ್ರಮಕ್ಕೆ ತಾವುಗಳು ಬೆಂಬಲಿಸುತ್ತಿದ್ದೇವೆ’ ಎಂದು ಘೋಷಿಸಿದರು.

ಗ್ರಾಮದ ಹಿರಿಯರಾದ ಲಿಂಗನಗೌಡ ಪಾಟೀಲ, ಸೋಮನಗೌಡ ಪಾಟೀಲ, ಅಮರೇಶ ತಿಳಿ, ನಾಗರಾಜ, ಭೀಮಣ್ಣ ಗದ್ದಿ, ಹನುಮಂತಪ್ಪ, ಕಾಶಿಂಸಾಬ, ಬಸಪ್ಪ, ಬಸವಂತರಾಯ, ವಿರೇಶ, ಮಹಾದೇವಯ್ಯ, ಅಮರಪ್ಪ , ವಿರೇಶ, ಮಲ್ಲಿಕಾರ್ಜುನ, ಅಮರಗುಂಡ ಸೇರಿದಂತೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಮೆರವಣಿಗೆ: ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ತಂಡ ಯರಡೋಣ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅಲಂಕೃತ ಚಕ್ಕಡಿಯಲ್ಲಿ  ಭಜನೆ ಭಾಜಾ ಭಜಂತ್ರಿ, ಡೊಳ್ಳು ಮೇಳ ಸಮೇತ ಗ್ರಾಮದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು.

ಚೌಡೇಶ್ವರಿ, ವೀರಭದ್ರೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು