ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಲಾಲರ ಮೌಲ್ಯ ಅನುಸರಿಸಲು ಕರೆ

ರಾಯಚೂರು ಕೃಷಿ ವಿಜ್ಞಾನಗಳ ವಿವಿಯಲ್ಲಿ ಸಂತ ಸೇವಾಲಾಲ ಜಯಂತಿ
Last Updated 15 ಫೆಬ್ರುವರಿ 2020, 14:00 IST
ಅಕ್ಷರ ಗಾತ್ರ

ರಾಯಚೂರು: ‘ಮನುಷ್ಯ ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿರಬೇಕು. ಪ್ರಾಮಾಣಿಕವಾಗಿ ಬದುಕಬೇಕು ಎಂದು ಪ್ರತಿಪಾದಿಸಿದ್ದ ಸಂತ ಸೇವಾಲಾಲ ಅವರ ಮೌಲ್ಯಗಳನ್ನು ಎಲ್ಲರೂ ಅನುಸರಿಸಬೇಕು’ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಅಮರೇಶ ಬಲ್ಲಿದವ ಕರೆ ನೀಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರೇಕ್ಷಾಗೃಹದಲ್ಲಿ ಶನಿವಾರ ಏರ್ಪಡಿಸಿದ್ದ ‘ಸಂತ ಸೇವಾಲಾಲರ 281ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಸುಳ್ಳು ಹೇಳಬಾರದು. ಪ್ರಾಮಾಣಿಕ ಜೀವನ ನಡೆಸಬೇಕು. ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿರಬೇಕು. ಮದ್ಯಪಾನ ಮಾಡಬಾದರು. ವೈಯಕ್ತಿಕವಾಗಿ ನಿರ್ಭಯವಾಗಿ ಬದುಕಬೇಕು. ಯಾವುದೇ ತಾರತಮ್ಯ ಮಾಡಬಾರದು ಎಂಬುದನ್ನು ಹೇಳಿದ್ದರು. ಹೆಣ್ಣು ಮಗು ಜನಿಸಿದರೆ, ಅದು ಭಗವಂತನ ದೇಣಿಗೆ ಎಂದು ತಿಳಿಯಬೇಕು ಎಂದು ಹೇಳಿದ್ದರು. ಅರಣ್ಯ ನಾಶ ಮಾಡುವವರು ತಮ್ಮನ್ನು ತಾವೇ ನಾಶ ಮಾಡಿಕೊಂಡಂತೆ. ನೀರನ್ನು ಮಾರಾಟ ಮಾಡುವುದು ಅಪರಾಧ ಎಂದಿದ್ದರು. ಇಂತಹ ಅನೇಕ ಮೌಲ್ಯಗಳನ್ನು ಪ್ರತಿಪಾದನೆ ಮಾಡಿದ ಸೇವಾಲಾಲರು ಮಹಾನ್‌ ವ್ಯಕ್ತಿ. ಅವರು ಮೌಲ್ಯಗಳು ಸರ್ವಕಾಲಿಕ ಸತ್ಯ’ ಎಂದು ತಿಳಿಸಿದರು.

“ಸೇವಾಲಾಲರು ಒಂದು ಸಮುದಾಯಕ್ಕೆ ಮಾತ್ರವಲ್ಲ, ಮಾನವ ಜನಾಂಗಕ್ಕೆ ಮೌಲ್ಯಗಳನ್ನು ನೀಡಿ ಮಹಾನ್‌ ವ್ಯಕ್ತಿಯಾಗಿದ್ದಾರೆ. ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ ಜೀವನ ಹಾಗೂ ಪ್ರಕೃತಿಯೊಂದಿಗೆ ಮಾನವ ಸಂಬಂಧ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. ತಜ್ಞರು ಗುರುತಿಸಿರುವ ಪ್ರಕಾರ, 23 ಮೌಲ್ಯಗಳನ್ನು ಸೇವಾಲಾಲರು ಹೇಳಿದ್ದಾರೆ’ ಎಂದರು.

‘ಬಂಜಾರಾ ಸಮುದಾಯಕ್ಕೆ ಜನ್ಮತಃ ಅರಣ್ಯ ಸಂಬಂಧ ಬರುತ್ತದೆ. ಹೀಗಾಗಿ ಆಳ್ವಿಕೆ ಮಾಡುವವರೊಂದಿಗೆಈ ಬಗ್ಗೆ ಒಪ್ಪಂದ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ. ಆತಂಕ ಎದುರಾದಾಗ ಸಾತ್ವಿಕ ಹೋರಾಟ ಆರಂಭಿಸಬೇಕು ಎನ್ನುವುದು ಸೇವಾಲಾಲರ ನಿಲುವಾಗಿತ್ತು. ಮುಖ್ಯವಾಗಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಂಜಾರಾ ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದ್ದರು. ಜನ್ಮಜಾತವಾಗಿರುವ ಅರಣ್ಯ, ಸಂಸ್ಕೃತಿ ಉಳಿವಿಗಾಗಿ ನೈತಿಕ ಮೌಲ್ಯ ತುಂಬಿ ಹೋರಾಟಗಳನ್ನು ಮಾಡಿದ್ದಾರೆ’ ಎಂದು ವಿವರಿಸಿದರು.

‘ಸಂತ ಸೇವಾಲಾಲರ ಮಾನವೀಯ ಮೌಲ್ಯ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಆಶಯ ಜಾರಿಯಾಗಬೇಕು. ಇದರಿಂದ ಬೇರೆ ಸಮಯದಾಯಗಳೊಂದಿಗೆ ಬೆರೆತುಬಾಳುವ ಸೌಹಾರ್ದತೆ ಹೆಚ್ಚಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕಲಬುರ್ಗಿಯ ಕೆಎಸ್‌ಎಫ್‌ಸಿ ಉಪ ವ್ಯವಸ್ಥಾಪಕ ಡಾ.ಗಣಪತಿ ರಾಠೋಡ ಮಾತನಾಡಿ, ‘ಸಂತ ಸೇವಾಲಾಲ ಅವರು ದೈವವಾಗಿದ್ದು, ಅವರನ್ನು ಬಂಜಾರಾ ಸಮುದಾಯ ಆರಾಧನೆ ಮಾಡುತ್ತಿದೆ. ಸೇವಾಲಾಲ ಅವರ ಮೇಲೆ ನಂಬಿಕೆ ಇಟ್ಟುಕೊಂಡು ಮಾಡುವ ಎಲ್ಲ ಕೆಲಸಗಳು ಕೈಗೂಡುತ್ತವೆ’ ಎಂದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವೀರನಗೌಡ ಪರಸರೆಡ್ಡಿ ಮಾತನಾಡಿ, ಬಂಜಾರಾ ಸಮುದಾಯದ ಜನರು ಮಾತುಕೊಟ್ಟರೆ ಪ್ರಾಣಹೋದರೂ ಮಾತು ತಪ್ಪುವುದಿಲ್ಲ. ನವರಾತ್ರಿ ಹಾಗೂ ಮದುವೆ ಸಮಾರಂಭಗಳು ಬಂಜಾರಾ ಸಮುದಾಯದಲ್ಲಿ ವಿಶೇಷವಾಗಿರುತ್ತವೆ ಎಂದು ಹೇಳಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಸಿದ್ದಪ್ಪ ಭಂಡಾರಿ, ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಸ್‌.ಕೆ. ಮೇಟಿ ಇದ್ದರು. ರಾಜಣ್ಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT