ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿನಗರ: ವಾಹನ ಸವಾರರಿಗೆ ದೂಳಿನ ಮಜ್ಜನ

ಹಾರುಬೂದಿ ಕೊಂಡೊಯ್ಯುವಾಗ ರಸ್ತೆಯಲ್ಲಿ ಬೀಳುವ ದೂಳು
Last Updated 1 ಡಿಸೆಂಬರ್ 2022, 5:11 IST
ಅಕ್ಷರ ಗಾತ್ರ

ಶಕ್ತಿನಗರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳು, ವಾಹನ ಸವಾರರು ದೂಳಿನ ಮಜ್ಜನದಿಂದ ಬೇಸತ್ತು ಹೋಗಿದ್ದಾರೆ. ವಾಹನಗಳು ಸಂಚರಿಸಿದಾಗ, ಜೋರಾಗಿ ಗಾಳಿ ಬೀಸಿದಾಗ ಅನೇಕ ರಸ್ತೆಗಳಲ್ಲಿ ಜನರು ಕಣ್ಣುಜ್ಜಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.

ಲಾರಿ, ಟಿಪ್ಪರ್ ಮತ್ತು ಟ್ಯಾಂಕರ್‌ಗಳಿಂದ ಆರ್‌ಟಿಪಿಎಸ್‌ನ ಹಾರುಬೂದಿ ಕೊಂಡೊಯ್ಯುವಾಗ ರಸ್ತೆಗಳಲ್ಲಿ ಬೂದಿ ಬೀಳುತ್ತಿದೆ. ಅಲ್ಲದೆ ಶಕ್ತಿನಗರದ ಒಂದನೇ ಮತ್ತು ಎರಡನೇ ಕ್ರಾಸ್ ರಸ್ತೆಗಳಲ್ಲಿ ಶೇಖರಣೆಯಾಗಿರುವುದು ಸಾಮಾನ್ಯ ದೂಳಲ್ಲ. ಬೂದಿ ಮೆತ್ತಿಕೊಂಡು ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗುತ್ತವೆ.

ದಿನವಿಡೀ ಓಡಾಡುವ ಬೂದಿ ವಾಹನಗಳಿಂದ, ರಸ್ತೆಯ ಮೇಲೆ ಬೀಳುವ ಬೂದಿಯನ್ನು ಸ್ವಚ್ಛತೆ ಮಾಡದೆ ಹಾಗೇ ಬಿಡುವುದರಿಂದ ಶಕ್ತಿನಗರದಲ್ಲಿ ದೂಳು ಕಾಯಂ ಅತಿಥಿಯಂತಾಗಿ ಆವರಿಸಿಕೊಳ್ಳುತ್ತಿದೆ. ಭಾರಿ ವಾಹನ ಹೋದಾಗ ದಟ್ಟ ಅಲೆಯಾಗಿ ಚದುರುವ ದೂಳಿನ ಅರ್ಧದಷ್ಟು ಮತ್ತೆ ಅದೇ ಪ್ರದೇಶದಲ್ಲಿ ಕೂಡುತ್ತದೆ. ರಸ್ತೆ ದೂಳುಮಯವಾಗಿ ಹಾಳಾಗುತ್ತ ಹೋಗುತ್ತದೆ. ಪಾದಚಾರಿಗಳು, ವಾಹನ ಸವಾರರು, ಅಂಗಡಿಯವರು ದೂಳಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಕಣ್ಣು, ಮೂಗು, ಕಿವಿಯೊಳಗೆ ಸೇರುವ ದೂಳು ವಿವಿಧ ರೋಗಗಳಿಗೆ ಕಾರಣವಾಗುತ್ತಿದೆ. ಗಂಟಲಿಗಿಳಿದರೆ ಈ ದೂಳು ಶ್ವಾಸಕೋಶದಲ್ಲಿ ಸೇರಿಕೊಂಡು ಅಸ್ತಮಾ, ನ್ಯುಮೋನಿಯಾದಂಥ ಕಾಯಿಲೆಗೆ ಮುನ್ನುಡಿ ಆಗಬಹುದು. ಗಂಟಲು ಕೆರೆತದಂಥ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿದೆ.

ನ.23ರಿಂದ ಡಿ.2ರವರೆಗೆ ಸೂಗೂರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಮತ್ತು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆ ಆಗುತ್ತಿದೆ. ದೂಳಿನಿಂದಾಗಿ ಎದುರಿಗೆ ಬರುವ ವಾಹನ ಸಹ ಕಾಣಿಸುವುದಿಲ್ಲ. ಅಪಘಾ ತಗಳು ಸಂಭವಿಸುವ ಸಾಧ್ಯತೆ ಇದೆ.

ರಸ್ತೆಯಲ್ಲಿ ಬಿದ್ದಿರುವ ಬೂದಿ ದೂಳನ್ನು ಸ್ವಚ್ಛ ಮಾಡುವಂತೆ ಆರ್‌ಟಿಪಿಎಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಮೇಲೆ ಬಿದ್ದಿರುವ ಬೂದಿಯ ದೂಳನ್ನು ಸ್ವಚ್ಛಗೊಳಿಸಿ, ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ದೇವಸೂಗೂರು ಗ್ರಾಮ ಘಟಕದ ಉಪಾಧ್ಯಕ್ಷ ಶೇಖರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT