ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ’

Last Updated 3 ಆಗಸ್ಟ್ 2019, 13:27 IST
ಅಕ್ಷರ ಗಾತ್ರ

ರಾಯಚೂರು: ಆಸೆ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ರೋಗಗಳಿಗೆ ಜನರು ಬಲಿಯಾಗುತ್ತಿದ್ದು, ಪುರಾಣ ಮತ್ತು ಪ್ರವಚನ ಆಲಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಶರಣರ ಸಮಾಗಮದಿಂದ ಜೀವನ ಪಾವನವಾಗಲಿದ್ದು, ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗಲಿದೆ ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.

ನಗರದ ಕಿಲ್ಲೇ ಬೃಹನ್ಮಠದಲ್ಲಿ ಶ್ರಾವಣಮಾಸದ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಸಂತ ಶಿಶುನಾಳ ಶರೀಫರ ಜೀವನ ದರ್ಶನ ಪ್ರವಚನವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸಾರ ಹಾಗೂ ಕೆಲಸದ ಒತ್ತಡದಲ್ಲಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಮಠ–ಮಾನ್ಯಗಳು ಜನರನ್ನು ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿವೆ. ಸನ್ಮಾರ್ಗ ತೋರುವ ಕಾರ್ಯ ಮಠ–ಮಾನ್ಯಗಳಿಂದ ನಡೆಯುತ್ತಿದೆ ಎಂದರು.

ಗುಡುಗುಂಟಿ ಮರಿಸ್ವಾಮಿ ಮಠದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿದೆ. ತಾಳ್ಮೆ, ನಂಬಿಕೆ ಇದ್ದಾಗ ಜೀವನಕ್ಕೆ ಬೆಲೆ ದೊರೆಯುತ್ತದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದು ಹೇಳಿದರು.

ಕಿಲ್ಲೇ ಬೃಹ್ಮಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ತಿಳಿಯಲು ಗೋವಿಂದಭಟ್ಟರು, ಸಂತ ಶಿಶುನಾಳ ಶರೀಫರ ಅನುಬಂಧ ಅರಿತುಕೊಳ್ಳಬೇಕಾಗಿದೆ. ಶ್ರಾವಣಮಾಸದಲ್ಲಿ ಉತ್ತಮ ವಿಚಾರಗಳನ್ನು ಆಲಿಸಿದಾಗ ಜೀವನ ಪಾವನವಾಗಲಿದೆ ಎಂದು ತಿಳಿಸಿದರು.

ಆತ್ಮಕೂರಿನ ರಾಯಪಲ್ಲಿ ಸಂಸ್ಥಾನದ ಲಿಂಗಮಠದ ಶಿವನಾಗರಾಜು ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದಂಪತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರಸಭೆ ಸದಸ್ಯರಾದ ದರೂರು ಬಸವರಾಜ, ಈ.ವಿನಯಕುಮಾರ, ನಾಗರಾಜ, ತಿಮ್ಮಪ್ಪ ನಾಯಕ, ಮುಖಂಡರಾದ ಸಣ್ಣ ನರಸರೆಡ್ಡಿ, ಮಹೇಂದ್ರರೆಡ್ಡಿ, ಡಾ.ನಿಜಗುಣ ಶಿವಯೋಗಪ್ಪ ಜವಳಿ, ಜಿ.ಶಿವಮೂರ್ತಿ, ಹರಿಶ್ಚಂದ್ರರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT