ಜಿಎನ್‌ವಿ 10-89 ಭತ್ತದ ಬೆಳೆಯ ಕ್ಷೇತ್ರೋತ್ಸವ

7
ಹರವಿ ಗ್ರಾಮದಲ್ಲಿ ‘ಅಲ್ಪಾವಧಿಯಲ್ಲಿ ಅಧಿಕ ಬೆಳೆಯುವ ಭತ್ತ’

ಜಿಎನ್‌ವಿ 10-89 ಭತ್ತದ ಬೆಳೆಯ ಕ್ಷೇತ್ರೋತ್ಸವ

Published:
Updated:
Prajavani

ರಾಯಚೂರು: ಅಲ್ಪಾವಧಿಯಲ್ಲಿ ಭತ್ತದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಜಿಎನ್‌ವಿ 10–89 ತಳಿ ವಿಶೇಷವಾಗಿದೆ ಎಂದು ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್‌. ಯಡಹಳ್ಳಿ ಹೇಳಿದರು.

ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹರವಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಬುಧವಾರ ಏರ್ಪಡಿಸಿದ್ದ ಜಿಎನ್‌ವಿ 10-89 ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ಈ ತಳಿ ಬಳಕೆ ಹಾಗೂ ಸಿಫಾರಸು ಮಾಡಿದ್ದು ಸಾರಜನಕ ನಿರ್ವಹಣೆಗಾಗಿ. ಎಲೆಯ ವರ್ಣಫಲಕ ಬಳಕೆ ಮಾಡಿದ್ದಲ್ಲಿ ಪ್ರತಿ ಎಕರೆಗೆ ಶೇ 15–20ರಷ್ಟು ಸಾರಜನಕ ಪ್ರಮಾಣ ಕಡಿಮೆ ಮಾಡಬಹುದಾಗಿದೆ ಎಂದರು.

ವಿಸ್ತರಣಾ ನಿರ್ದೇಶಕ ಡಾ. ಬಿ.ಎಂ. ಚಿತ್ತಾಪುರ ಮಾತನಾಡಿ, ಬೇರೆ ಭತ್ತದ ತಳಿಗಳಿಗೆ ಹೋಲಿಸಿದಾಗ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಹೆಚ್ಚಿನ ಇಳುವರಿ ಕೊಡಬಲ್ಲ ಸಾಮರ್ಥ್ಯ ಹೊಂದಿದೆ. ಹಾಗಾಗಿ ರೈತರು, ಕೀಟ, ರೋಗಗಳ ಹಾವಳಿಯಿಂದ ತಪ್ಪಿಸಲು ಅಲ್ಪಾವಧಿ ಭತ್ತದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಭತ್ತದಲ್ಲಿ ಸಾರಜನಕ ನಿರ್ವಹಣೆ ಹಾಗೂ ಕಡಿಮೆ ಪ್ರಮಾಣದ ಬಳಕೆಗಾಗಿ ಸಾರಜನಕ ನಿರ್ವಹಣೆಗೆ ಎಲೆಯ ವರ್ಣಫಲಕ ಬಳಸಿ, ಕೊರತೆಗೆ ಅನುಗುಣವಾಗಿ ಸಾರಜನಕ ಪೂರೈಸಬೇಕು. ಭತ್ತದ ಹೆಚ್ಚಿನ ಇಳುವರಿಗಾಗಿ ಬಿತ್ತನೆ ಸಮಯ 25 ಕೆಜಿ ಬಿತ್ತಿದ 21 ದಿನಗಳ ನಂತರ ವರ್ಣಫಲಕ ಬಳಸಿ ಶಿಫಾರಸಿನಂತೆ ಬಳಕೆ ಮಾಡಿ, ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಹೇಳಿದರು.

ಮಳೆಯ ವ್ಯತಿರಿಕ್ತ ಪ್ರಭಾವದಿಂದ ಬೆಳೆ ಪದ್ಧತಿ ಬದಲಾಗುತ್ತಿದ್ದು, ಈ ವರ್ಷ ತುಂಬ ಪ್ರಭಾವ ಬೀರಿದೆ. ಇದಕ್ಕೆ ಪೂರಕವಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕೃಷಿ ವಿಜ್ಞಾನಗಳ ವಿಶ್ಯವಿದ್ಯಾಲಯದಿಂದ ಜನವರಿ 27 ಮತ್ತು 28 ರಂದು ರೈತರ ಮೇಳವನ್ನು ಅಯೋಜಿಸಲಾಗುತ್ತದೆ. ಈ ಮೇಳದಲ್ಲಿ ರೈತರೊಂದಿಗೆ ಸಂವಾದ ಏರ್ಪಡಿಸಲಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಾಹುಕಾರ ಮಾತನಾಡಿ, ನೀರು ನಿಲ್ಲಿಸಿ ಭತ್ತದ ಬೇಸಾಯ ಕೈಗೊಳ್ಳುವಲ್ಲಿ 5 ಸೆಂ.ಮೀ. ನಷ್ಟು ನೀರು ನಿಲ್ಲಿಸಿ ಕಡಿಮೆ ನೀರು ಬಳಸಬೇಕು ಎಂದು ಹೇಳಿದರು.

ಡಾ. ಮಹಾಂತ ಶಿವಯೋಗಿ ಮಾತನಾಡಿ, ಈ ತಳಿಯು ಸೋನಾಮಸೂರಿ ಮಾದರಿಯ ಸಣ್ಣ ಕಾಳಿನ ಗಾತ್ರವನ್ನು ಹೊಂದಿದೆ. ಈ.ಎನ್.ವಿ.-10-89 ತಳಿಯು ಅಲ್ಪಾವಧಿಯ ತಳಿಯಾಗಿದ್ದು, 115 ರಿಂದ 120 ದಿನಗಳಲ್ಲಿ ಮಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಸರಾಸರಿ 28–30 ಕಾಳಿನ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಬೆಂಕಿ ರೋಗಕ್ಕೆ ಸಹನಾ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.

ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ. ಜಿ.ಎನ್. ಮಾತನಾಡಿ, ಭತ್ತದಲ್ಲಿ ಬೇಸಾಯ ವೆಚ್ಚ ಕಡಿಮೆಗೊಳಿಸುವಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆ ಅತಿಮುಖ್ಯ. ಭತ್ತದಲ್ಲಿ ಅಲ್ಪಾವಧಿ ತಳಿಗಳ ಬಳಕೆ ಹಾಗೂ ನೀರಾವರಿ ನಿರ್ವಹಣೆ, ಕೀಟ ಹಾಗೂ ರೋಗಗಳ ಭಾದೆಗೆ ಪೂರಕವಾಗಿವೆ. ಹಾಗಾಗಿ ರೈತರು ಭತ್ತದಲ್ಲಿ ಗದ್ದೆಗೆ ನೀರು ಒದಗಿಸುವುದು ಹಾಗೂ ಖಾಲಿ ಮಾಡುವ ಪದ್ಧತಿಯನ್ನು ಶಿಫಾರಸಿನಂತೆ ಅಳವಡಿಸಿದ್ದಲ್ಲಿ ಕೀಟಗಳ ಪ್ರಮಾಣ ಕಡಿಮೆ ಗೊಳಿಸಬಹುದಾಗಿದೆ. ಭತ್ತದಲ್ಲಿ ಸಾರಜನಕ ಪೂರೈಕೆ ಹೆಚ್ಚಿಸಿದಲ್ಲಿ ರಸಹೀರುವ ಕೀಟಗಳು ಹೆಚ್ಚಾಗುತ್ತವೆ. ಹಾಗಾಗಿ, ಶಿಫಾರಸು ಮಾಡಿದ ಸಾರಜನಕದೊಂದಿಗೆ ಸಾವಯವ ಗೊಬ್ಬರ ಬಳಸುವುದು ಅತ್ಯವಶಕ ಎಂದು ತಿಳಿಸಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಬಿ.ಎಂ. ಚಿತ್ತಾಪುರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶರಣಬಸನಗೌಡ ಪಾಟೀಲ, ಹರವಿ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಯ್ಯ ನಾಯಕ್,  ಶಶಿಧರ ಗೌಡ ಮಾಲಿ ಪಾಟೀಲ, ಬಸವನಗೌಡ ಮಾಲಿ ಪಾಟೀಲ ಇದ್ದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಲ್ಹಾದ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !