ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ: ಶ್ರೀರಾಮುಲು

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಂದ ರಾಜ್ಯೋತ್ಸವ ಭಾಷಣ
Last Updated 1 ನವೆಂಬರ್ 2019, 15:20 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಆಲ್‌ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಆಸ್ಪತ್ರೆ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಡಿ.ಎ.ಆರ್. ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ರಾಯಚೂರು ಐತಿಹಾಸಿಕವಾಗಿ ಪ್ರಸಿದ್ಧವಾದ ಜಿಲ್ಲೆ. ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯು 2,000 ವರ್ಷಗಳಷ್ಟು ಪ್ರಾಚೀನವಾಗಿದ್ದು, ಹಳೆಯ ಶಿಲಾಯುಗದ ಸಂಸ್ಕೃತಿಯಿಂದ ಪ್ರಾರಂಭವಾಗಿದೆ. ರಾಜ್ಯದ ಎಲ್ಲಾ ಮುಖ್ಯ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಯಚೂರು ಮುಖ್ಯ ಪಾತ್ರ ವಹಿಸಿತ್ತು. ಜಿಲ್ಲೆಯ ಅನೇಕ ಭಾಗಗಳಲ್ಲಿ ದೊರೆತ ಶಿಲಾಶಾಸನಗಳು, ಅಳಿದುಳಿದು ನಿಂತಿರುವ ಕೋಟೆ ಕೊತ್ತಲಗಳು ಹಾಗೂ ದೇವಸ್ಥಾನಗಳು ಈ ಜಿಲ್ಲೆಯ ಇತಿಹಾಸವನ್ನು ತಿಳಿಸುತ್ತಿವೆ ಎಂದು ಹೇಳಿದರು.

ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಆಲೋಚನೆಗಳ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಬೇಕಿದೆ. ಆಧುನಿಕ ತಂತ್ರಜ್ಞಾನವನ್ನು ಎಲ್ಲ ರಂಗಗಳಲ್ಲಿ ಅಳವಡಿಸಿಕೊಂಡು ಮುನ್ನಡೆಯುವ ಮಹಾನ್ ಶಕ್ತಿಯನ್ನು ಎಲ್ಲರೂ ಪ್ರದರ್ಶಿಸಬೇಕಾಗಿದೆ ಎಂದು ತಿಳಿಸಿದರು.

ಪ್ರಧಾನಿಯ ಜೊತೆಯಲ್ಲಿ ಇಸ್ರೋ ಕೇಂದ್ರದಲ್ಲಿ ಚಂದ್ರಯಾನ ವೀಕ್ಷಣೆಗಾಗಿ ಜಿಲ್ಲೆಯ ವೈಷ್ಣವಿ ಆಯ್ಕೆಯಾಗಿದ್ದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.ಪ್ರತಿಯೊಬ್ಬ ಬಡವರಿಗೆ ನೆರವಾಗುವದಕ್ಕಾಗಿ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರದಲ್ಲಿ ಎಂದಿಗೂ ಕನ್ನಡಕ್ಕೇ ಆದ್ಯತೆ, ಎಲ್ಲರೂ ಒಟ್ಟಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪಣ ತೊಡಬೇಕಾಗಿದೆ ಎಂದರು.

ಹಾಜರಿದ್ದವರು:ಶಾಸಕ ಡಾ.ಎಸ್. ಶಿವರಾಜ್ ಪಾಟೀಲ, ವಿಧಾನ ಪರಿಷತ್ ಶಾಸಕ ಎನ್.ಎಸ್. ಭೋಸರಾಜು, ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್‌, ತಹಸೀಲ್ದಾರ್‌ ಹಂಪಣ್ಣ ಇದ್ದರು. ಶಿಕ್ಷಕ ದಂಡಪ್ಪ ಬಿರಾದರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT