ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿದ ದೇವರು

7
ಉಮಳಿಪನ್ನೂರು ಗ್ರಾಮದಲ್ಲಿ ‘ಸಿದ್ದಗಂಗಾ ನಗರ’ ನಿರ್ಮಾಣ

ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿದ ದೇವರು

Published:
Updated:
Prajavani

ಮಾನ್ವಿ: ಮಾನ್ವಿ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದಲ್ಲಿರುವ ಪುಟ್ಟ ಗ್ರಾಮ ಉಮಳಿಪನ್ನೂರು ಶಾಶ್ವತ ನೆರೆಪೀಡಿತ ಗ್ರಾಮದ ಹಣೆಪಟ್ಟಿ ಹೊಂದಿದೆ.

ಪ್ರತಿವರ್ಷ ಮಳೆಗಾಲ ಬಂದರೆ ಸಾಕು ಗ್ರಾಮಸ್ಥರು ಕುಟುಂಬ ಸಮೇತರಾಗಿ ಊರು ತೊರೆಯುವ ಪರಿಸ್ಥಿತಿ ಸಾಮಾನ್ಯವಾಗಿತ್ತು. ತುಂಗಭದ್ರಾ ನದಿಯ ಪ್ರವಾಹದಿಂದ ಇಡೀ ಗ್ರಾಮ ಜಲಾವೃತಗೊಂಡು ನೀರಿನಲ್ಲಿ ಮುಳುಗಡೆಯಾಗಿ ಗ್ರಾಮಸ್ಥರು ನಿರಾಶ್ರಿತರಾಗುತ್ತಿದ್ದರು. 2009ರಲ್ಲಿ ಉಂಟಾದ ಭೀಕರ ನೆರೆಹಾವಳಿಯಿಂದ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಖರಾಬದಿನ್ನಿ, ದೇವಿಪುರ, ಜಾಗೀಪನ್ನೂರು, ಚೀಕಲಪರ್ವಿ, ಕಾತರಕಿ, ಉಮಳಿಪನ್ನೂರು, ದದ್ದಲ ಮುಂತಾದ ಗ್ರಾಮಗಳು ಜಲಾವೃತಗೊಂಡಿದ್ದವು. ಗ್ರಾಮಸ್ಥರು ನಿರಾಶ್ರಿತರಾಗಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದರು. 

ರಾಜ್ಯದ ಹಲವು ಸಂಘ ಸಂಸ್ಥೆಗಳ ನೆರವು ಹಾಗೂ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿತ್ತು. ಆಗ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಖುದ್ದಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಯಚೂರು ಜಿಲ್ಲಾಧಿಕಾರಿ  ಅನ್ಬುಕುಮಾರ ಅವರನ್ನು ಸಂಪರ್ಕಿಸಿ ಉಮಳಿಪನ್ನೂರು ಗ್ರಾಮದ ಸ್ಥಳಾಂತರಕ್ಕೆ ವಿಶೇಷ ಕಾಳಜಿವಹಿಸಿದ್ದರು.

ಉಮಳಿಪನ್ನೂರು ಗ್ರಾಮವನ್ನು ದತ್ತು ಪಡೆದ ಸಿದ್ದಗಂಗಾ ಮಠ ಗ್ರಾಮದ ಸ್ಥಳಾಂತರಕ್ಕಾಗಿ 30ಎಕರೆ ಪ್ರದೇಶದಲ್ಲಿ ₨3ಕೋಟಿ ವೆಚ್ಚದ 200 ಸುಸಜ್ಜಿತ ‘ಆಸರೆ’ ಮನೆಗಳನ್ನು ನಿರ್ಮಿಸಿಕೊಟ್ಟರು.  ಸಿದ್ದಗಂಗಾ ಮಠದ ನೆರವಿನಿಂದ ಮನೆಗಳು ನಿರ್ಮಾಣವಾದ ಕಾರಣ ಗ್ರಾಮಸ್ಥರು ತಮ್ಮ  ಹೊಸ ಕಾಲೋನಿಗೆ ‘ಸಿದ್ದಗಂಗಾ ನಗರ’ ಎಂದು ನಾಮಕರಣ ಮಾಡುವ ಮೂಲಕ ಮಠದ ಬಗ್ಗೆ  ಅಭಿಮಾನ ಮತ್ತು ಕೃತಜ್ಞತಾ ಭಾವ ಮೆರೆದಿದ್ದಾರೆ. ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ  ಮತ್ತಿತರ ಗಣ್ಯರು ಗ್ರಾಮಕ್ಕೆ ಆಗಮಿಸಿ ನೆರೆಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಿದ್ದರು.

ಉಮಳಿಪನ್ನೂರು ಗ್ರಾಮದ ‘ಸಿದ್ದಗಂಗಾ ನಗರ’ಕ್ಕೆ ನಡೆದಾಡುವ ದೇವರು ಹಾಗೂ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಪ್ರತಿ ಮನೆಯಲ್ಲಿ ನಾಲ್ಕು ಕೊಠಡಿ, ವೈಯಕ್ತಿಕ ಶೌಚಾಲಯ, ಮನೆಯ ಮುಂದೆ ವಿಶಾಲವಾದ ಕಟ್ಟೆ, ಸೋಲಾರ್ ವಿದ್ಯುದ್ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಮನೆಗಳ ಮುಂದೆ ನೆಟ್ಟಿದ್ದ ಸಸಿಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಕಾಲೋನಿಯಲ್ಲಿ ಸುಸಜ್ಜಿತ ರಸ್ತೆಗಳು, ಒಳಚರಂಡಿ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರಿನ ಸೌಕರ್ಯ ಇವೆ. ಗ್ರಾಮದ ಎಲ್ಲೆಡೆ ಕಾಣುವ ಸ್ವಚ್ಛತೆ ಗಮನ ಸೆಳೆಯುತ್ತದೆ. ಗ್ರಾಮಸ್ಥರು ಪ್ರತಿ ವರ್ಷ ಶಿವಕುಮಾರ ಸ್ವಾಮೀಜಿ ಜನ್ಮ ದಿನಾಚರಣೆ ಪ್ರಯುಕ್ತ ಬಡಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆಯಂತಹ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. 

ಸೋಮವಾರ ಬೆಳಿಗ್ಗೆ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಶಿವಕುಮಾರ ಸ್ವಾಮೀಜಿ ಬೇಗ ಗುಣಮುಖರಾಗಲು ಸಾಮೂಹಿಕ ಪ್ರಾರ್ಥನೆ,  ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದರು.

ಮಧ್ಯಾಹ್ನದ ಹೊತ್ತಿಗೆ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಲೇ ಗ್ರಾಮದಲ್ಲಿ ನೀರವ ಮೌನ ಆವರಿಸಿತು.  ಗ್ರಾಮಸ್ಥರು ಸ್ವಾಮೀಜಿಗೆ ಅಗಲಿಕೆಗೆ ಶೋಕ ವ್ಯಕ್ತಪಡಿಸಿದರು. ‘ನಮಗೆಲ್ಲಾ ಶಾಶ್ವತ ಸೂರು ಕಲ್ಪಿಸಿ ಬದುಕು ಹಸನಗೊಳಿಸಿದ ದೇವರು’ ಎಂದು ಕಂಬನಿ ಮಿಡಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !