ರಾಯಚೂರು: ‘ಮುಡಾ ಹಗರಣ ಮುಂದಿಟ್ಟುಕೊಂಡು ಬಿಜೆಪಿ–ಜೆಡಿಎಸ್ ನಾಯಕರು ಪಾದಯಾತ್ರೆ ಮಾಡುವ ಮೂಲಕ ಸಿದ್ದರಾಮಯ್ಯನವರನ್ನು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮಹಿಳಾ ಘಟಕದ ನಾಯಕಿ ಶ್ರೀದೇವಿ ನಾಯಕ ಆರೋಪಿಸಿದರು.
‘ಸಿದ್ದರಾಮಯ್ಯನವರ ಪತ್ನಿಯ ನಿವೇಶನ ಮುಡಾದಿಂದ ಬೇರೆಯವರಿಗೆ ಹಂಚಿಕೆ ಮಾಡಿದ್ದು, ಆನಂತರ ಬಿಜೆಪಿಯೇ ರೂಪಿಸಿದ ನಿಯಮಾನುಸಾರ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘50:50 ಅನುಪಾತದ ನಿಯಮದ ಪ್ರಕಾರವೂ ಪರಿಹಾರ ನೀಡಿಲ್ಲ. ಶೇ 38ರಷ್ಟು ಮಾತ್ರ ಪರಿಹಾರ ಕೊಡಲಾಗಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಅನ್ಯಾಯವಾದರೂ ಸಿದ್ದರಾಮಯ್ಯನವರ ವಿರುದ್ಧ ಹೋರಾಟ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರ ದೂರಿಗೆ ಸ್ಪಂದಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದ್ದು ಖಂಡನೀಯ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬದಿಂದ ಮುಡಾ ಅಕ್ರಮ ನಿವೇಶನ ಪಡೆದ, ಡಿನೋಟಿಫೈ ಮಾಡಿದ ಆರೋಪವಿತ್ತು. ಇದನ್ನು ಬಿಜೆಪಿಯ ಅವಧಿಯಲ್ಲಿ ತನಿಖೆ ನಡೆಸಿಲ್ಲ. ಈಗ ಮುಖ್ಯಮಂತ್ರಿಯ ತೇಜೋವಧೆಗೆ ಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.
ಪಕ್ಷದ ಪದಾಧಿಕಾರಿಗಳಾದ ಮಂಜುಳಾ ಅಮರೇಶ, ಶಶಿಕಲಾ ಭೀಮರಾಯ, ಪ್ರೇಮಲತಾ, ಖಾಸಿಂಬಿ, ಭಾರತಿ ಉಪಸ್ಥಿತರಿದ್ದರು.