ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ‘ಈದ್‌ ಉಲ್ ಫಿತ್ರ್’ ಸರಳ ಆಚರಣೆ

ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಸಂದೇಶ; ಕೋವಿಡ್ ಮಾರ್ಗಸೂಚಿ ಪಾಲಿಸಲು ಸಲಹೆ
Last Updated 13 ಮೇ 2021, 2:40 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್‌ನಿಂದ ಈ ವರ್ಷವೂ ಈದ್‌ ಉಲ್ ಫಿತ್ರ್‌ ಸಂಭ್ರಮಕ್ಕೆ ಅಡ್ಡಿಯಾಗಿದ್ದು, ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸುವಂತೆ ಧರ್ಮ ಬೋಧಕರು ಮುಸ್ಲಿಮರಿಗೆ ಸಂದೇಶ ನೀಡಿದ್ದಾರೆ.

ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಮಸೀದಿ ಹಾಗೂ ದರ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಕೊರೊನಾ ಎರಡನೇ ಅಲೆಯು ವ್ಯಾಪಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ಮನವರಿಕೆ ಮಾಡುತ್ತಿದ್ದಾರೆ.

ರಂಜಾನ್‌ ಉಪವಾಸ ಆರಂಭವಾಗುವ ಪೂರ್ವದಲ್ಲೇ ಕೊರೊನಾ ವ್ಯಾಪಿಸಿಕೊಂಡಿತ್ತು. ಸಂಪೂರ್ಣ ಹಬ್ಬದ ಸಂಭ್ರಮ ಕಸಿದುಕೊಂಡಿದ್ದರಿಂದ ಪ್ರತಿವರ್ಷದಂತೆ ಹೊಸ ಬಟ್ಟೆಗಳನ್ನು ಖರೀದಿಸುವುದಕ್ಕೂ ಸಾಧ್ಯವಾಗಿಲ್ಲ. ಮನೆಗಳಲ್ಲಿ ಮತ್ತು ಮನಗಳಲ್ಲಿ ಮಾತ್ರ ಈದ್ ಉಲ್‌ ಫಿತ್ರ್‌ ಹಬ್ಬದ ಪವಿತ್ರತೆಯನ್ನು ತುಂಬಿಕೊಳ್ಳುವಂತಾಗಿದೆ.

‘ಕೋವಿಡ್ ಮಾನವ ಕುಲಕ್ಕೆ ಒಂದು ಪರೀಕ್ಷೆಯಂತಿದೆ. ಕೋವಿಡ್ ನಿಂದ ಹಲವರು ಕೆಲಸ ಕಾರ್ಯವಿಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದು ಉಳ್ಳವರು ಬಡವರ ಸಹಾಯಕ್ಕೆ ಮುಂದೆ ಬರಬೇಕು. ಕೋವಿಡ್ ನಿಂದ ದೇಶ ಮಾತ್ರವಲ್ಲದೇ ಹಲವಾರು ಮುಸ್ಲಿಂ ದೇಶಗಳು ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧ ಹೇರಿವೆ’ ಎಂದು ರಾಯಚೂರಿನ ಶಮ್ಸ್ ಆಲಂ ದರ್ಗಾದ ಸಜ್ಜಾದ್ ಎ ನಶೀನ್ ಮತ್ತು ಮುತವಲ್ಲಿ ಸೈಯದ್ ಅಶ್ರಫ್ ರಝಾ ಅವರು ತಿಳಿಸಿದ್ದಾರೆ.

‘ಸರ್ಕಾರದ ನಿಯಮನುಸಾರ ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ನಿರ್ಬಂಧಿಸಲಾಗಿದ್ದು ಎಲ್ಲರೂ ಹಬ್ಬದ ದಿನ ಮನೆಯಲ್ಲಿಯೇ ನಮಾಜ್ ಮಾಡಬೇಕು. ಈದ್ ಉಲ್ ಫಿತ್ರ್‌ ನಮಾಜ್‌ಗೆ ಪ್ರತಿವರ್ಷ ಮೌಲ್ವಿ ಅವರ ನೇತೃತ್ವದಲ್ಲಿ ಎರಡು ರಕಾತ್ ನಮಾಜ್ ಮಾಡಲಾಗುತ್ತಿತ್ತು. ಆದರೆ ಈಗ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದ ಕಾರಣ 2+2 ನಾಲ್ಕು ರಕಾತ್ ಚಾಸ್ತ್ ನಫೀಲ್ ನಮಾಝ್ ಮಾಡಬೇಕು’ ಎಂದು ಏಕ್ ಮಿನಾರ್ ಮಸೀದಿಯ ಇಮಾಮ್ ಮೊಹಮ್ಮದ್ ಸುಕೂರ್ ಸಾಬ್ ಅವರು ಸಲಹೆ ನೀಡಿದ್ದಾರೆ.

‘ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪಾಲನೆ ಮಾಡುವುದು ನಮ್ಮ ಕರ್ತವ್ಯ. ಜಾಮಿಯ ನಿಝಾಮಿಯ ಹೈದ್ರಾಬಾದ್‌ನ ಪ್ರಮುಖರ ಫತ್ವಾ ಹೊರಡಿಸಿದ್ದು ಅದರ ಪ್ರಕಾರ ಹಬ್ಬದ ಸಂದರ್ಭ ಮಾಡುವ ನಮಾಜ್ ಸಾಮೂಹಿಕವಾಗಿ ಮಸೀದಿ, ಈದ್ಗಾದಲ್ಲಿ ಮಾಡದೇ ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ವೈಯಕ್ತಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯಗೊಳಿಸಿದೆ. ಇಸ್ಲಾಂ ಧರ್ಮದಲ್ಲಿ ಅನುಕೂಲಕ್ಕೆ ತಕ್ಕಂತೆ ಸರಳವಾಗಿ ಆಚರಣೆಗೆ ಆದ್ಯತೆ ನೀಡಿದೆ’ ಎಂದು ಜಹೀರಾಬಾದ್ ಮಸೀದಿಯ ಇಮಾಮ್ ಮೊಹಮ್ಮದ್ ಮಹೆಬೂಬ್ ಆಲಂ ಅವರು ವಿವರಿಸಿದ್ದಾರೆ.

‘ಕೋವಿಡ್ ತೀವ್ರವಾಗಿ ಹರಡುತ್ತಿರುವ ಕಾರಣ ನಿಯಮ ಪಾಲನೆ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಇಸ್ಲಾಂ ಧರ್ಮದಲ್ಲಿ ಯಾವುದೇ ಒಂದು ಜಾಗದಲ್ಲಿ ಒಂದು ಖಾಯಿಲೆ ಹರಡುತ್ತಿದ್ದರೆ ಆ ಜಾಗಕ್ಕೆ ಹೋಗುವುದು ಹಾಗೂ ಅಲ್ಲಿನವರು ಬೇರೆ ಜಾಗಕ್ಕೆ ತೆರಳುವುದನ್ನು ಸ್ವಯಂ ನಿರ್ಬಂಧಿಸಿಕೊಳ್ಳಲು ತಿಳಿಸಿದೆ' ಎಂದು ಫಾತಿಮಾ ಮಸೀದಿಯ ಇಮಾಮ್ ಮೌಲಾನಾ ನಿಜಾಮುದ್ದೀನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT