ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾವು

ಶನಿವಾರ, ಏಪ್ರಿಲ್ 20, 2019
27 °C
ರಾಯಚೂರು ತಾಲ್ಲೂಕಿನಲ್ಲಿ 800 ಹೆಕ್ಟೇರ್‌ ಮಾವಿನ ಮರಗಳ ತೋಟ

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾವು

Published:
Updated:
Prajavani

ರಾಯಚೂರು: ನಿಸರ್ಗದಲ್ಲಿ ಚಿಗುರೆಲೆಗಳು ಅರಳುವ ಯುಗಾದಿ ಹಬ್ಬದ ಹೊಸ ವರ್ಷದೊಂದಿಗೆ ತರಹೇವಾರಿ ಮಾವಿನಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿವೆ.

ಬಿರು ಬಿಸಿಲಿನಿಂದ ಬೇಸತ್ತಿರುವ ಜನರಿಗೆ ಮಾವಿನ ಹಣ್ಣುಗಳ ಹಳದಿ–ಹಸಿರು ಮಿಶ್ರಿತ ರೂಪವು ಕಣ್ಣಿಗೆ ತಂಪು ಸೂಸುತ್ತಿವೆ. ಬಾಯಾರಿಕೆಯಿಂದ ಬಳಲಿದ ದೇಹಕ್ಕೆ ಮಾವಿನ ಸಿಹಿ ಕೈ ಮಾಡಿ ಕರೆಯುತ್ತಿವೆ. ಬೆನಿಶಾನ್‌, ದಸೇರಿ, ರಸೆಲ್‌ ಮಾವುಗಳು ಏಪ್ರಿಲ್‌ ಮೊದಲ ವಾರದಿಂದ ಮಾರಾಟಕ್ಕೆ ಬಂದಿದ್ದು, ಜನರು ತವಕದಿಂದ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆಲವೆ ವ್ಯಾಪಾರಿಗಳ ಬಳಿ ಸದ್ಯ ಮಾವಿನ ಹಣ್ಣುಗಳು ಮಾರಾಕ್ಕಿವೆ. ಹೀಗಾಗಿ ದರ ಕೂಡಾ ಸ್ವಲ್ಪ ದುಬಾರಿ.

ಲಿಂಗಸುಗೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ, ರಾಯಚೂರು ತಾಲ್ಲೂಕಿನ ಚಂದ್ರಬಂಡಾ, ಗಿಲ್ಲೇಸುಗೂರು ಹಾಗೂ ಯರಗೇರಾ ಹೋಬಳಿಗಳಲ್ಲಿ ಮಾವಿನ ತೋಟಗಳು ಹೆಚ್ಚಿನ ಪ್ರಮಾಣದಲ್ಲಿವೆ. ಎಲ್ಲ ಕಡೆಗೂ ಮಾವು ಇನ್ನೂ ಸಂಪೂರ್ಣವಾಗಿ ಮಾಗಿಲ್ಲ. ಕೆಲವು ತಳಿಗಳ ಮಾವು ಮಾತ್ರ ಮಾರಾಟಕ್ಕೆ ಲಭ್ಯವಾಗಿವೆ. ಮಾರುಕಟ್ಟೆ ತುಂಬೆಲ್ಲ ಮಾವಿನ ಹಣ್ಣುಗಳ ದರ್ಬಾರ ಶುರುವಾಗಲು ಇನ್ನೊಂದು ವಾರ ಬೇಕು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಮಹೇಶ ಹಿರೇಮಠ ಅವರು ಹೇಳುವಂತೆ ‘ಜಿಲ್ಲೆಯಲ್ಲಿ ರಾಯಚೂರು ತಾಲ್ಲೂಕಿನಲ್ಲಿಯೇ ಅತಿಹೆಚ್ಚು ಮಾವಿನ ತೋಟಗಳಿವೆ. ಸುಮಾರು ಎರಡು ಸಾವಿರ ಎಕರೆ ಮಾವಿನ ಮರಗಳನ್ನು ರೈತರು ಬೆಳೆದಿದ್ದಾರೆ. ಕೆಲವು ಕಡೆ ನೈಸರ್ಗಿಕವಾಗಿ ಮಾಗಿದಂತೆ ಹಣ್ಣುಗಳು ಕಂಡು ಬರುತ್ತಿದ್ದರೂ ಸಂಪೂರ್ಣವಾಗಿ ಸಿಹಿ ತುಂಬಿಕೊಂಡಿಲ್ಲ. ಏಪ್ರಿಲ್‌ 10 ರ ನಂತರ ಮಾವಿನಹಣ್ಣುಗಳು ಸವಿಯುವುದಕ್ಕೆ ಸಿಗುತ್ತವೆ’ ಎಂದರು.

‘ಮಾವಿನ ಹಣ್ಣುಗಳ ಖರೀದಿಯಲ್ಲಿ ಜನರು ಎಚ್ಚರಿಕೆ ವಹಿಸಬೇಕು. ಕೆಲವರು ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಮಾಗಿಸಿ ಹಣ್ಣುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿದ್ದಾರೆ. ರಾಯಚೂರು ತಾಲ್ಲೂಕಿನಲ್ಲಿ ಸದ್ಯಕ್ಕೆ ಮಾವು ಮಾಗಿಲ್ಲ. ಹೊರ ರಾಜ್ಯಗಳಿಂದ ಬರುವ ಹಣ್ಣುಗಳು ಮಾತ್ರ ಮಾರಾಟವಾಗುತ್ತಿವೆ’ ಎಂದು ತಿಳಿಸಿದರು.

‘ಗಿಡದಲ್ಲಿ ಸಾಕಷ್ಟು ಮಾವಿನ ಹಣ್ಣುಗಳಿವೆ. ಅವುಗಳ ಗಾತ್ರ ಹೆಚ್ಚಾಗಬೇಕು. ನೈಸರ್ಗಿಕವಾಗಿ ಉರುಳಿ ಬಿದ್ದಾಗ ಮಾತ್ರ ಅವುಗಳನ್ನು ನೈಸರ್ಗಿಕವಾಗಿ ಮಾಗಿಸುವುದಕ್ಕೆ ಇಡುತ್ತೇವೆ. ಈಗ ಸ್ವಲ್ಪ ಹಣ್ಣುಗಳು ಮಾತ್ರ ಮಾಗಿದ್ದು, ಕೆಲವರಿಗೆ ಮಾತ್ರ ಹಣ್ಣುಗಳನ್ನು ಕೊಡುವುದಕ್ಕೆ ಸಾಧ್ಯವಾಗುತ್ತಿದೆ. ಇನ್ನೊಂದು ವಾರದಲ್ಲಿ ನಿಯಂತ್ರಣಕ್ಕೆ ಬಾರದಷ್ಟು ಹಣ್ಣುಗಳು ಸಿಗುತ್ತವೆ’ ಎಂದು ಮಾಸದೊಡ್ಡಿ ಗ್ರಾಮದಲ್ಲಿ ಮಾವಿನ ತೋಟ ಹೊಂದಿರುವ ರೈತ ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾವು ಖರೀದಿಸಲು ಬಂದಿದ್ದ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರ ಭೀಮಸೇನರಾವ್‌, ‘ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳಲ್ಲಿ ಮಾತ್ರ ಮಾಗಿದ ಮಾವಿನ ಹಣ್ಣುಗಳಿವೆ. ಆದರೂ ಅಷ್ಟೊಂದು ರುಚಿ ಕಂಡು ಬರುತ್ತಿಲ್ಲ. ಯುಗಾದಿ ಹಬ್ಬಕ್ಕೆ ಮಾವು ಖರೀದಿಸುವ ಆಸೆಯಿಂದ ಬಂದಿದ್ದೇವೆ. ಈಗಷ್ಟೇ ಸೀಜನ್‌ ಶುರುವಾಗಿದ್ದು, ಇನ್ನು ಮುಂದೆ ಮಾವಿನ ಹಣ್ಣು ಬೇಕಾದಷ್ಟು ಬರಬಹುದು’ ಎಂದರು.

ರಾಯಚೂರು ಮಾರುಕಟ್ಟೆಯಲ್ಲಿ ಕೆಲವೆ ದಿನಗಳಲ್ಲಿ ಮಾಲಗೋವಾ, ತೊತಾಪುರಿ, ಜಲಾಲ್‌, ರಾಣಿಕೇಸರ, ನೀಲಂ, ಮಲ್ಲಿಕಾ, ಮಾಮಿಡಿ ಸೇರಿದಂತೆ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಬರಲಿವೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !