ಸೋಮವಾರ, ಆಗಸ್ಟ್ 26, 2019
27 °C
ಜಲಾಶಯಗಳ ಮಟ್ಟದ ಬಗ್ಗೆ ವ್ಯಾಟ್ಸ್‌ ಗ್ರುಪ್‌ಗಳಲ್ಲಿ ತತಕ್ಷಣವೆ ಮಾಹಿತಿ

ಪ್ರವಾಹ ಮಾಹಿತಿ: ಸಾಮಾಜಿಕ ಜಾಲತಾಣದ ಪರಿಣಾಮಕಾರಿ ಬಳಕೆ

Published:
Updated:
Prajavani

ರಾಯಚೂರು: ಜಿಲ್ಲೆಯಲ್ಲಿ ಉಂಟಾದ ಕೃಷ್ಣಾನದಿ ಹಾಗೂ ತುಂಗಭದ್ರಾ ನದಿಗಳ ಪ್ರವಾಹದ ರೀತಿಯಲ್ಲಿಯೇ ಪ್ರವಾಹಕ್ಕೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿಗಳು, ಚಿತ್ರಗಳು ಹಾಗೂ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಿಂದ ಸಮಸ್ಯೆಗಳಿದ್ದ ಕಡೆಗೆ ಕೂಡಲೇ ಅಧಿಕಾರಿಗಳು ಕ್ರಮ ವಹಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕವೇ ಕ್ರಮದ ಮಾಹಿತಿಯನ್ನು ರವಾನಿಸುತ್ತಿರುವುದು ವಿಶೇಷ.

ಜುಲೈ 28 ರಂದು ಬೆಳಿಗ್ಗೆ 8 ಗಂಟೆಗೆ ನಾರಾಯಣಪುರ ಜಲಾಶಯದಿಂದ 50 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಯಿತು. ರಾತ್ರಿ ಹೊತ್ತಿಗೆ ನೀರಿನ ಪ್ರಮಾಣ ಒಂದು ಲಕ್ಷ ಕ್ಯುಸೆಕ್‌ಗೆ ತಲುಪಬಹುದು ಎಂದು ಪ್ರವಾಹಕ್ಕೆ ಸಂಬಂಧಿಸಿದ ಮೊದಲ ಸಂದೇಶವನ್ನು ಜಿಲ್ಲಾಡಳಿತವು ವ್ಯಾಟ್ಸ್‌ ಆ್ಯಪ್‌ ಗ್ರುಪ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿತು. ಇದು ಸುದ್ದಿ ವಾಹಿನಿಗಳ ಮೂಲಕ ತತಕ್ಷಣದಲ್ಲಿ ಬಿತ್ತರವಾಯಿತು, ಮರುದಿನ ಪತ್ರಿಕೆಗಳಲ್ಲೂ ಪ್ರವಾಹ ಆರಂಭವಾದ ಸವಿವರ ಮತ್ತು ನದಿತೀರಗಳಲ್ಲಿ ವಹಿಸುವ ಮುನ್ನಚ್ಚರಿಕೆಯ ಸುದ್ದಿಗಳು ಜನರಿಗೆ ಸಿಗುವಂತಾಯಿತು. ಕೂಡಲೇ ಜಿಲ್ಲಾಡಳಿತವು ನದಿತೀರಗಳಲ್ಲಿ ಕಟ್ಟೆಚ್ಚರ ವಹಿಸುವುದಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡಗಳನ್ನು ರಚಿಸಿ ನಿಯೋಜಿಸಿತು.

29 ರ ಬೆಳಿಗ್ಗೆಯಿಂದಲೇ ನಿಯೋಜಿತ ತಂಡಗಳು ನದಿಗೆ ಅಡ್ಡಲಾಗಿರುವ ಸೇತುವೆಗಳ ಬಗ್ಗೆ ಮತ್ತು ನದಿಪ್ರವಾಹದ ಬಗ್ಗೆ ಸ್ಥಳದಿಂದಲೇ ಚಿತ್ರ ಸಹಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಗ್ರುಪ್‌ಗಳಲ್ಲಿ ಹಂಚಿಕೊಳ್ಳಲಾರಂಭಿಸಿದರು. ನದಿತೀರ ಗ್ರಾಮಗಳ ಜನರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಿದರು. ಒಂದು ಲಕ್ಷ ಕ್ಯೂಸೆಕ್‌ನಿಂದ ಆರಂಭಿಸಿ ಗರಿಷ್ಠ 6.5 ಲಕ್ಷ ಕ್ಯೂಸೆಕ್‌ವರೆಗೂ ಕೃಷ್ಣಾನದಿಯ ಪ್ರವಾಹದ ಮಟ್ಟ ಏರಿಕೆಯಾಯಿತು. ಪ್ರತಿ ಹಂತದಲ್ಲೂ ನದಿತೀರ ಪ್ರದೇಶಗಳಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಮಾಹಿತಿಯನ್ನು ಸಾಮಾಜಿಕ ತಾಲತಾಣಗಳ ಮೂಲಕವೆ ಅಧಿಕಾರಿಗಳು ಮಾಧ್ಯಮಗಳ ಮೂಲಕ ಜನರಿಗೆ ನೀಡುತ್ತಲೇ ಇದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆಗಳಲ್ಲಿ ಜನರು ಅನುಭವಿಸುತ್ತಿದ್ದ ಸಮಸ್ಯಾತ್ಮಕ ಚಿತ್ರಗಳು, ಸಮಸ್ಯೆಗಳನ್ನು ಹೇಳಿಕೊಳ್ಳುವ ವಿಡಿಯೋಗಳು ಸಾಮಾಜಿಕ ತಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಮುಖ್ಯವಾಗಿ ನಡುಗಡ್ಡೆಯಲ್ಲಿ ಉಳಿದಿದ್ದ ಜನರು, ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳ ಮಧ್ಯೆ ಸಾಮಾಜಿಕ ಜಾಲತಾಣವು ಸಂಪರ್ಕ ಕೊಂಡಿಯಾಗಿತ್ತು.  ಜಿಲ್ಲಾಡಳಿತವು ರಚಿಸಿದ್ದ ವ್ಯಾಟ್ಸ್‌ ಅ್ಯಪ್‌ ಗ್ರುಪ್‌ ಮೂಲಕವೇ ಅನೇಕ ದೂರು ದುಮ್ಮಾನಗಳು ಅಧಿಕಾರಿಗಳ ಗಮನಕ್ಕೆ ಬಂದವು.

ವಿವಿಧೆಡೆ ಪರಿಹಾರ ಕೇಂದ್ರಗಳನ್ನು ಆರಂಭಿಸಿದ ಮೊದಲ ದಿನವೆ ಊಟ, ಉಪಹಾರ ಸಮಸ್ಯೆ ಇದೆ ಎನ್ನುವ ಚಿತ್ರಗಳು ವೈರಲ್‌ ಆಗುತ್ತಿದ್ದವು, ಕೂಡಲೇ ಎಚ್ಚೆತ್ತ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಿ ಪ್ರವಾಹ ಪೀಡಿತರು ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವಿಸುವ ಚಿತ್ರಗಳನ್ನು ವ್ಯಾಟ್ಸ್‌ ಅ್ಯಪ್‌ ಗ್ರುಪ್‌ನಲ್ಲಿ ಸಂಗ್ರಹಿಸಿ ಮಾಧ್ಯಮದ ಗ್ರುಪ್‌ಗಳಲ್ಲಿ ಹರಿಬಿಟ್ಟರು.

ಪ್ರವಾಹ ಪೀಡಿತರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಚಿತ್ರಗಳು, ವಿಡಿಯೋಗಳು ಹರಿದಾಡಿದಂತೆಯೆ, ಸಮಸ್ಯೆಗೆ ಪರಿಹಾರ ಒದಗಿಸಿದ ಚಿತ್ರಗಳು, ವಿಡಿಯೋಗಳು ಕೂಡಾ ವೈರಲ್‌ ಆಗಿದ್ದು ಗಮನಾರ್ಹ. ಸಮಸ್ಯೆ ಕಂಡುಬಂದ ಕಡೆಗಳಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಜಿಲ್ಲೆಯ ವಿವಿಧೆಡೆ ನಿಯೋಜಿಸಲಾಗಿದ್ದ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳಿಗೆ ಸೂಚಿಸಲಾಗುತ್ತಿತ್ತು. ಅಷ್ಟೇ ಬೇಗನೆ ಪ್ರತ್ಯುತ್ತರವನ್ನು ಚಿತ್ರಸಹಿತ ಪಡೆದುಕೊಂಡು ಮಾಧ್ಯಮಗಳಿಗೆ, ಜನರಿಗೆ ಮಾಹಿತಿ ತಲುಪಿಸಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದೆ.

 

Post Comments (+)