ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಆರೋಗ್ಯವಾಗಿದ್ದರೆ ಎಲ್ಲರಿಗೂ ಆರೋಗ್ಯ: ಕೃಷಿ ಇಲಾಖೆ ಜಂಟಿ ನಿರ್ದೇಶಕ ನಯೀಮ್

ಕೃಷಿ ಪರಿಕರಗಳ ಮಾರಾಟಗಾರರಿಗೆ ತರಬೇತಿ
Last Updated 9 ಫೆಬ್ರುವರಿ 2022, 13:13 IST
ಅಕ್ಷರ ಗಾತ್ರ

ರಾಯಚೂರು: ವಿಜ್ಞಾನಿಗಳ ಶಿಫಾರಸು ಆಧರಿಸಿ ರಸಗೊಬ್ಬರ, ಜೈವಿಕ ಗೊಬ್ಬರ, ತಿಪ್ಪೆಗೊಬ್ಬರ ಹಾಗೂ ಸಾವಯವ ಗೊಬ್ಬರ ಬಳಸಿ ಸಮತೋಲನ ಆಹಾರದ ವ್ಯವಸ್ಥೆ ಮಾಡಬೇಕು. ಮಣ್ಣು ಆರೋಗ್ಯವಾಗಿದ್ದರೆ, ಎಲ್ಲರ ಆರೋಗ್ಯವು ಚೆನ್ನಾಗಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ನಯೀಮ್‌ ಹುಸೇನ್‌ ಹೇಳಿದರು.

ರಾಯಚೂರು ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕ್ರಿಬ್ಕೋ ಸಹಕಾರಿ ಗೊಬ್ಬರ ಸಂಸ್ಥೆ ಹಾಗೂ ಕೃಷಿ ಇಲಾಖೆಯಿಂದ ಈಚೆಗೆ ಆಯೋಜಿಸಿದ್ದ ‘ರಸಗೊಬ್ಬರಗಳ ಬಳಕೆ ಮತ್ತು ಮಣ್ಣಿನ ಅರೋಗ್ಯ ಕುರಿತು ಕೃಷಿ ಪರಿಕರಗಳ ಮಾರಾಟಗಾರರಿಗೆ ತರಬೇತಿ‘ಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಹೆಚ್ಚಾಗಿರುವ ಜನಸಂಖ್ಯೆಗೆ ಆಹಾರ ಒದಗಿಸಲು ಅತಿಹೆಚ್ಚು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಉಪಯೋಗಿಸಲಾಗುತ್ತಿದೆ. ಇದರಿಂದ ಮನುಷ್ಯರ ಆರೋಗ್ಯದ ಜೊತೆಗೆ ಮಣ್ಣಿನ ಆರೋಗ್ಯವು ಕೆಡುತ್ತಿದೆ ಎಂದರು.

ರಾಯಚೂರು ಕ್ರಿಭ್ಕೋ ಹಿರಿಯ ವಲಯ ವ್ಯವಸ್ತಾಪಕ ಕೆ. ಮುತ್ತು ರಾಮಲಿಂಗಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಅತಿಹೆಚ್ಚು ಇಳುವರಿ ಪಡೆಯಲು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಯಥೇಚ್ಛವಾಗಿ ಮಾಡುತ್ತಿದ್ದಾರೆ. ರೈತರು ನೇರವಾಗಿ ಕೃಷಿ ಪರಿಕರಗಳ ಮಾರಾಟಗಾರರೊಂದಿಗೆ ಸಂಪರ್ಕವನ್ನು ಹೊಂದಿರುತ್ತಾರೆ. ಆದ್ದರಿಂದ, ರೈತರಿಗೆ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಲ್ಲಿ ವೈಜ್ಞಾನಿಕವಾಗಿ ಮಾರ್ಗದರ್ಶನ ಅವಶ್ಯಕ ಎಂದು ತಿಳಿಸಿದರು.

ಕ್ರಿಭ್ಕೋ ಮಾರಾಟ ವ್ಯವಸ್ಥಾಪಕ ರಾಮಕುಮಾರ ಎ.ಎಸ್. ಮಾತನಾಡಿ, ಸಮಗ್ರ ಕೃಷಿಯು ಸುಸ್ಥಿರ ಕೃಷಿಯಾಗಿ ಮುಂದುವರೆಯಲು ಮಣ್ಣಿನ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಅತಿಯಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಕೆಡುತ್ತಿದೆ. ವಿಜ್ಞಾನಿಗಳ ಸಲಹೆ ಮೇರೆಗೆ ಸಸ್ಯಗಳಿಗೆ ಗೊಬ್ಬರ ಹಾಗೂ ಕೀಟನಾಶಕಗಳು ಎಷ್ಟು ಬೇಕು, ಅಷ್ಟು ಮಾತ್ರ ಬೆಳೆಗಳಿಗೆ ಒದಗಿಸಬೇಕು ಎಂದು ತಿಳಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಡಿ.ಎಂ. ಚಂದರಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಕರಗಳ ಮಾರಾಟಕ್ಕಿಂತ ರೈತರ ಅಭ್ಯುದಯ ಮುಖ್ಯ. ಇದರಿಂದ ದೇಶದ ಅಭಿವೃದ್ಧಿಗೆ ಸಾಧ್ಯ. ಮಾನವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಣ್ಣಿನ ಆರೋಗ್ಯ ಅತ್ಯವಶ್ಯಕ. ಅರೋಗ್ಯವಂತ ಭೂಮಿಯಿಂದ ಗುಣಮಟ್ಟದ ಬೆಳೆ ಉತ್ಪಾದನೆ ಹಾಗೂ ಅರೋಗ್ಯವಂತ ಜನಾಂಗ ಸಾಧ್ಯ ಎಂದು ತಿಳಿಸಿದರು.

ಕೃಷಿಯಲ್ಲಿ ಜೀವ ವೈವಿದ್ಯತೆ ಕಾಪಾಡಿಕೊಳ್ಳುವುದು ಅವಶ್ಯಕ. ಜೀವ ವೈವಿದ್ಯತೆ ಉಳಿಯಬೇಕಾದರೆ ಕೃಷಿ ಪರಿಕರಗಳ ಮಾರಾಟಗಾರರು ನೈತಿಕ ಹೊಣೆಯನ್ನು ಹೊತ್ತು ರೈತರಿಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ರೈತರು ಖರ್ಚು ಕಡಿಮೆ ಮಾಡಿ, ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್., ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪ್ರಹ್ಲಾದ ಮಾತನಾಡಿದರು. ಕ್ರಿಬ್ಕೋ ಕ್ಷೇತ್ರ ಅಧಿಕಾರಿ ಶಶಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಣ್ಣು ವಿಜ್ಞಾನಿ ಡಾ.ಎಸ್. ಭಟ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT