ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪೂರ್ವಸಿದ್ಧತೆ ತೃಪ್ತಿಕರ: ರಾವತ್

ಮೊಬೈಲ್ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ; ನಮ್ಮ ಮುಂದಿರುವ ದೊಡ್ಡ ಸವಾಲು
Last Updated 6 ಏಪ್ರಿಲ್ 2018, 9:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಪೂರ್ವಸಿದ್ದತೆ ತೃಪ್ತಿಕರವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಚುನಾವಣೆ ಪೂರ್ವಸಿದ್ದತೆಗೆ ಸಭೆ ನಡೆದಿದ್ದೇವೆ. ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಬಹುತೇಕ ರಾಜಕೀಯ ಪಕ್ಷಗಳ ಪ್ರಮುಖರು ಚುನಾವಣಾ ನೀತಿ ಸಂಹಿತೆ ಜಾರಿ, ಅದರಲ್ಲೂ ಅಧಿಕಾರಿಗಳ ವರ್ಗಾವಣೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂದರು.

ರಾಜಕೀಯ ಪಕ್ಷಗಳ ಜತೆ ಸಂಪರ್ಕ ಹೊಂದಿರುವ ಅಧಿಕಾರಿಗಳ ಬಗ್ಗೆ ದೂರು ಬಂದಿವೆ. ಅಂಥ ಅಧಿಕಾರಿಗಳ ವಿರುದ್ದ ಆಯೋಗ ಕ್ರಮ ಕೈಗೊಳ್ಳುತ್ತದೆ‌.

ಟಿವಿ ವಾಹಿನಿಗಳ ಮೂಲಕ ರಾಜಕೀಯ ಪಕ್ಷಗಳ ಪ್ರಚಾರದ ಮೇಲೆ ಹೆಚ್ಚಿನ ಗಮನ ಇರಿಸಲಾಗುತ್ತದೆ. ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಿಂದ ವಿನಾಯತಿ ಕೇಳಿದ್ದಾರೆ‌. ಇದರ ಬಗ್ಗೆ ಪರಿಶೀಲನೆ ನಡೆಸುತ್ತವೆ.

ಸೇವಾ ಮತದಾರರಿಗೆ ಎಲೆಕ್ಟ್ರಿಕಲಿ ಟ್ರಾನ್ಸ್‌ಮಿಟೆಡ್ ವೋಟಿಂಗ್ ಸಿಸ್ಟಂ ಬಳಕೆ ಮಾಡಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಕನಿಷ್ಟ ಮೂಲಸೌಕರ್ಯ, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತದೆ.

ಇವಿಎಂ, ವಿ.ವಿ.ಪ್ಯಾಟ್ ಬಗ್ಗೆ ಅರಿವು ಕಾರ್ಯಕ್ರಮ ಜಾರಿಯಲ್ಲಿದೆ. 150 ಕಂಪನಿ ಸಿಆರ್‌ಪಿಎಫ್‌ ಈಗಾಗಲೇ ಕರ್ನಾಟಕಕ್ಕೆ ಬಂದಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಪಡೆಗಳನ್ನು ಕರೆಸಲಾಗುತ್ತದೆ.

ಹಣ ವರ್ಗಾವಣೆ ಮತ್ತು ಸಾಗಣೆ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಆದಾಯ ತೆರಿಗೆ ಇಲಾಖೆಯೂ ನೆರವು ನೀಡುತ್ತಿದೆ. ಮೊಬೈಲ್ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ತಡೆಯುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ಬಗ್ಗೆ ಜನರು ಮಾಹಿತಿ ನೀಡಬೇಕು.

ಇದುವರಗೆ 2 ಕೋಟಿ ಹಣ, 2.47 ಕೆ.ಜಿ ಚಿನ್ನ, 3.7 ಕೋಟಿ ಮೌಲ್ಯದ ವಸ್ತುಗಳನ್ನು ಆಯೋಗ ವಶಪಡಿಸಿಕೊಂಡಿದೆ. ಅಕ್ರಮ ಮದ್ಯ ಸಾಗಣೆ ಪತ್ತೆಗೆ ಅಬಕಾರಿ ಇಲಾಖೆಯ 200 ತಂಡ ರಚಿಸಲಾಗಿದೆ.

ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಈಗಾಗಲೇ ಆಯೋಗ ತನ್ನ ಸ್ಪಷ್ಟತೆ ನೀಡಿದೆ. ಅದಕ್ಕಿಂತ ಹೆಚ್ಚೇನು ಹೇಳಲಾಗದು. ರಾಯಚೂರಿನಲ್ಲಿ ವಿವಿ ಪ್ಯಾಟ್‌ನಲ್ಲಿ ದೋಷ ಕಂಡು ಬಂದಿದ್ದು ನಿಜ. ಅದರಲ್ಲಿ ಹೆಚ್ಚುವರಿ ಅಭ್ಯರ್ಥಿಗಳ ಹೆಸರು ಸೇರಿಸಿದ ಕಾರಣ ಅದರಲ್ಲಿ ದೋಷ ಕಂಡು ಬಂತು. ಚುನಾವಣೆಯಲ್ಲಿ ಇಂಥ ದೋಷಗಳು ಬಾರದಂತೆ ಆಯೋಗ ಎಚ್ಚರಿಕೆ ವಹಿಸುತ್ತದೆ. ಯಂತ್ರಗಳಲ್ಲಿ ದೋಷ ಸಹಜ. ಅದನ್ನು ಸರಿಪಡಿಸಬೇಕಾದುದು ಅಧಿಕಾರಿಗಳ ಕರ್ತವ್ಯ.

ಕೆಂಪಯ್ಯ ವಿರುದ್ದ ದೇವೇಗೌಡರು ನೀಡಿರುವ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ತನಿಖೆಗೂ ಆದೇಶಿಸಿದೆ. ಅಂಥ ಯಾವುದೇ ಅಸಂವಿಧಾನ ಹುದ್ದೆಗಳಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ.

ಬಿಜೆಪಿಯ ಮುಷ್ಠಿಧಾನ್ಯ ಅಭಿಯಾನ, ಸಾಮೂಹಿಕ ಭೋಜನ ವಿಚಾರದ ಬಗ್ಗೆ ದೂರು ಬಂದಿಲ್ಲ. ಆದರೂ ಇದು ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದನ್ನು ಆಯೋಗ ಪರಿಶೀಲಿಸುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಎಂದು ಕಂಡು ಬಂದರೆ ತಕ್ಷಣ ಸ್ಥಗಿತಗೊಳಿಸಲು ಸೂಚನೆ ನೀಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT