ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡಿನೊಳಗಿನ ಹುಳದಂತಾದ ರೀಲರ್‌ಗಳು

ರೇಷ್ಮೆ ಉದ್ಯಮಕ್ಕೂ ತಟ್ಟಿದ ಮಾದರಿ ನೀತಿ ಸಂಹಿತೆ ಬಿಸಿ
Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚುನಾವಣೆ ಮತ್ತು ನೀತಿ ಸಂಹಿತೆಯ ಬಿಸಿ ಇದೀಗ ಜಿಲ್ಲೆಯಲ್ಲಿ ರೇಷ್ಮೆ ಗೂಡಿನ ನೂಲು ಬಿಚ್ಚುವುದನ್ನೇ ಬದುಕಾಗಿಸಿಕೊಂಡಿರುವ ಬಿಚ್ಚಾಣಿಕೆದಾರರ (ರೀಲರ್) ಬದುಕಿನ ಮೇಲೆ ಕೂಡ ಪರಿಣಾಮ ಬೀರಿದೆ.

ಮಾದರಿ ನೀತಿ ಸಂಹಿತೆ (ಎಂಸಿಸಿ) ಅಧಿಕಾರಿಗಳ ಭಯದಿಂದಾಗಿ ರೀಲರ್‌ಗಳು ದುಡ್ಡಿನೊಂದಿಗೆ ಮನೆಯಿಂದ ಹೊರಬರಲಾಗದೆ, ಗೂಡು ನೀಡಿದ ರೈತರಿಗೆ ಹಣ ನೀಡಲಾಗದೆ ಚಡಪಡಿಸುತ್ತಿದ್ದಾರೆ.

ಒಂದೆಡೆ ಚುನಾವಣಾ ಪ್ರಚಾರ ಆರಂಭದಿಂದಾಗಿ ರೇಷ್ಮೆ ನೂಲು ತೆಗೆಯಲು ಕಾರ್ಮಿಕರ ಕೊರತೆ ಎದುರಾಗಿದೆ. ಇನ್ನೊಂದೆಡೆ ರೇಷ್ಮೆ ನೂಲಿನ ವಹಿವಾಟು ಕುಸಿದಿದೆ. ಇದೆಲ್ಲದರ ಕಾರಣ ರೀಲರ್‌ಗಳು ಗೂಡಿನಿಂದ ಹೊರಬರಲಾಗದೆ ವಿಹ್ವಲಗೊಳ್ಳುವ ರೇಷ್ಮೆ ಹುಳುವಿನಂತಾಗಿದ್ದಾರೆ.

ಎಲ್ಲೆಂದರಲ್ಲಿ ಕೈ ಅಡ್ಡ ಹಾಕಿ ನಿಲ್ಲಿಸಿ ತಡಕಾಡುವ ಅಧಿಕಾರಿಗಳು ಹಣ ಪತ್ತೆಯಾದರೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು, ಸಮರ್ಪಕ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಅನೇಕ ರೀಲರ್‌ಗಳು ನೀತಿ ಸಂಹಿತೆ ಯಾವಾಗ ಕೊನೆಗೊಳ್ಳುತ್ತದೆ ಎಂದು ಎದುರು ನೋಡುತ್ತಿದ್ದಾರೆ.

ನೀತಿ ಸಂಹಿತೆಯ ಬಿಸಿಯಿಂದಾಗಿ ಸದ್ಯ ರೇಷ್ಮೆ ಉದ್ಯಮದ ಮೇಲೆ ಬೀರಿರುವ ಪರಿಣಾಮ ಕಚ್ಚಾ ರೇಷ್ಮೆ ಬೆಲೆ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ರೀಲರ್‌ಗಳು ಗೂಡು ಖರೀದಿಸಲು ಮುಂದೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಕಚ್ಚಾ ರೇಷ್ಮೆ ಬೆಲೆ ಕೂಡ ₹ 5 ಸಾವಿರದಿಂದ 2 ಸಾವಿರಕ್ಕೆ ಕುಸಿದು ಗಾಯದ ಮೇಲೆ ಬರೆ ಎಳೆದಂತಾಗಿದೆ.

‘ಸ್ಥಳೀಯ ಎಲ್ಲ ರೀಲರ್‌ಗಳು ಬೆಂಗಳೂರಿನಲ್ಲಿ ನಂಬಿಕಸ್ಥ ವ್ಯಕ್ತಿಗಳಿಗೆ ನೂಲನ್ನು ಮಾರಾಟ ಮಾಡುತ್ತೇವೆ. ಮಾರಿದ ನೂಲಿಗೆ ಯಾವುದೇ ದಾಖಲೆ ನೀಡುವುದಿಲ್ಲ. ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಬೆಂಗಳೂರಿನಿಂದ ಹಣ ತರಲು ಚೆಕ್‌ಪೋಸ್ಟ್‌ಗಳ ಭಯದಿಂದಾಗಿ ಆಗುತ್ತಿಲ್ಲ’ ಎನ್ನುತ್ತಾರೆ ರೀಲರ್‌ ನಂದಿ ಶ್ರೀನಿವಾಸ್.

‘ಮಾರಾಟ ಮಾಡಿದ ನೂಲಿಗೆ ಒಂದು ತಿಂಗಳ ನಂತರ ಹಣ ಕೈ ಸೇರುತ್ತದೆ. ನಿತ್ಯ ಕೆಲಸಕ್ಕೆ ಒಂದು ಲಾಟು ಗೂಡು ಖರೀದಿಸಲು ₹ 50ರಿಂದ 70 ಸಾವಿರ ಬೇಕಾಗುತ್ತದೆ. ಸದ್ಯ ಬ್ಯಾಂಕ್‌ಗಳಲ್ಲಿ ದಿನಕ್ಕೆ ₹ 30 ಸಾವಿರ ಹಣ ನೀಡಲಾಗುತ್ತಿದೆ. ಕೆಲಸಕ್ಕೆ ಬೇಕಾದಷ್ಟು ಗೂಡು ಖರೀದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ರೀಲರ್‌ಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಇತ್ತೀಚೆಗೆ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶಕ್ಕೆ ಇ– ಹರಾಜು ಎಂಬ ನಗದು ರಹಿತ ವಹಿವಾಟು ವ್ಯವಸ್ಥೆ ಜಾರಿ ತರಲಾಗಿದೆ’ ಎಂದು ಶಿಡ್ಲಘಟ್ಟದ ರೀಲರ್‌ ರಾಮಕೃಷ್ಣಪ್ಪ ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ರೀಲರ್‌ಗಳು ಅನಕ್ಷರಸ್ಥರಾಗಿರುವುದರಿಂದ ಇ–ಹರಾಜಿನ ವೇಳೆ ಮೊಬೈಲ್‌ನಲ್ಲಿ ನಂಬರ್‌ ಒತ್ತುವಾಗ ಮೋಸಕ್ಕೆ ಒಳಗಾಗಿರುವ ಅನೇಕ ಉದಾಹರಣೆಗಳಿವೆ. ಒಂದು ಸಾರಿ ಹರಾಜು ಪ್ರಕ್ರಿಯೆ ನಡೆದರೆ ಮುಗಿಯಿತು. ಸಾಲ ಮಾಡಿಯಾದರೂ ರೈತರಿಗೆ ಹಣ ತಲುಪಿಸಬೇಕು ಎಂದರು.

‘ನೀತಿ ಸಂಹಿತೆ ಜಾರಿಯಾಗುವ ಮುನ್ನ ಮಾರುಕಟ್ಟೆಯಲ್ಲಿ 1 ಕೆ.ಜಿ ಗೂಡು ₹ 450 ರಿಂದ 550ಕ್ಕೆ ಮಾರಾಟವಾಗುತ್ತಿತ್ತು. ಸದ್ಯ ಅದು ₹ 220 ರಿಂದ 400ಕ್ಕೆ ಕುಸಿದಿದೆ. ಸದ್ಯ ಹಬ್ಬ ಹರಿದಿನಗಳು ಇಲ್ಲ. ಹೀಗಾಗಿ ಕಚ್ಚಾ ರೇಷ್ಮೆ ಬೆಲೆಯಲ್ಲಿ ಕೂಡ ಇಳಿಕೆ ಕಂಡಿದೆ. ಚುನಾವಣೆಯ ಮುಗಿದ ನಂತರ ಗೂಡಿನ ಬೆಲೆಯಲ್ಲಿ ಹೆಚ್ಚಳವಾಗಬಹುದು’ಎಂದು ಅವರು ಹೇಳಿದರು.

ಪ್ರಚಾರದಿಂದ ಕಾರ್ಮಿಕರ ಕೊರತೆ
ಜಿಲ್ಲೆಯಲ್ಲಿ ದಿನೇ ದಿನೇ ಚುನಾವಣೆ ಕಾವು ರಂಗೇರುತ್ತಿರುವುದರಿಂದ ರೇಷ್ಮೆ ಹುಳುಗಳನ್ನು ಸಾಕಲು ಕಾರ್ಮಿಕರ ಕೊರತೆ ಉಂಟಾಗಿದೆ. 200 ಮೊಟ್ಟೆ ಹುಳುಗಳನ್ನು ಸಾಕಲು ಕನಿಷ್ಠ ಇಬ್ಬರಾದರೂ ಕಾರ್ಮಿಕರು ಬೇಕು. ಚುನಾವಣೆ ಪ್ರಚಾರಗಳು ಹೆಚ್ಚುತ್ತಿದ್ದಂತೆ ಹಳ್ಳಿಗಳಲ್ಲಿ ಕಾರ್ಮಿಕರು ದುಡ್ಡಿನಾಸೆಗೆ ಪ್ರಚಾರಕ್ಕೆ ಹೋಗುತ್ತಿದ್ದಾರೆ.

‘ರಾಜಕಾರಣಿಗಳ ಹಿಂದೆ ಹಳ್ಳಿಗಳನ್ನು ಸುತ್ತಾಡಿದರೆ ಸಾಕು ಬೈಕ್‌ಗೆ ಪೆಟ್ರೋಲ್‌, ಮದ್ಯ, ಎರಡು ಹೊತ್ತು ಊಟ, ಸಂಜೆ ವೇಳೆಗೆ ₹ 500 ಕೊಡುತ್ತಾರೆ. ಹೀಗಾಗಿ ಕೂಲಿ ಕಾರ್ಮಿಕರು ಸಿಗದಂತಾಗಿದೆ. ಆದ್ದರಿಂದ ನಮ್ಮ ಕೈಯಲ್ಲಿ ಆದ ಮಟ್ಟಿಗೆ ಹುಳು ಸಾಕಲು ಮುಂದಾಗಿದ್ದೇವೆ’ ಎಂದು ರೈತ ರೇಣುಮಾಕಲಹಳ್ಳಿ ವೆಂಕಟೇಶ್‌ ಹೇಳಿದರು.
–ಕೆಂಪೇಗೌಡ ಎನ್.ವೆಂಕಟೇನಹಳ್ಳಿ

*
ನೂಲು ಖರೀದಿಸುವವರು ಅದಕ್ಕೆ ಸಣ್ಣ ಚೀಟಿಯ ದಾಖಲೆ ನೀಡುತ್ತಾರೆ. ಹಣ ತರುವಾಗ ಚೆಕ್‌ಪೋಸ್ಟ್‌ನಲ್ಲಿ ಹಿಡಿದರೆ ಆ ಚೀಟಿಯನ್ನು ಅಧಿಕಾರಿಗಳು ಮಾನ್ಯ ಮಾಡುತ್ತಿಲ್ಲ. 
–ನಂದಿ ಶ್ರೀನಿವಾಸ್‌, ರೀಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT