ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ–ಸುವ್ಯವಸ್ಥೆಗೆ ಧಕ್ಕೆ ತರಬೇಡಿ

ರೌಡಿ ಶೀಟರ್‌ಗಳಿಗೆ ಎಸ್‌ಪಿ ಸಿ.ಬಿ. ವೇದಮೂರ್ತಿ ತಾಕೀತು
Last Updated 2 ಜುಲೈ 2019, 13:13 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಅವರು ರೌಡಿ ಶೀಟರ್‌ಗಳಿಗೆ ಬುಧವಾರ ಪರೇಡ್‌ ಆಯೋಜಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬದುಕುವ ಬಗ್ಗೆ ಅವರಿಗೆ ತಿಳಿವಳಿಕೆ ನೀಡಿದರು.

‘ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪೂರಕವಾಗಿ ಜೀವನ ರೂಪಿಸಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರಾಯಚೂರು ಜಿಲ್ಲೆಯು ಶಾಂತಿ, ಸೌಹಾರ್ದತೆಗೆ ಮೊದಲಿನಿಂದಲೂ ಹೆಸರುವಾಸಿ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಎಲ್ಲರೂ ಸಹಕರಿಸುವುದು ಕಡ್ಡಾಯ. ಅಶಾಂತಿಯನ್ನುಂಟು ಮಾಡುವ ಪ್ರಕರಣಗಳು ನಡೆಯಬಾರದು. ಕಾನೂನು ಕೈಗೆತ್ತಿಕೊಂಡು ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ರೌಡಿ ಶೀಟರ್‌ಗಳನ್ನೆಲ್ಲ ಇಲ್ಲಿಗೆ ಕರೆಯಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಜಾಂತಿ ನಿಂದನೆ ಮಾಡಿರುವ ಪ್ರಕರಣಗಳು ಜಿಲ್ಲೆಯಲ್ಲಿ ಬಹಳಷ್ಟು ದಾಖಲಾಗಿವೆ. ಸಮಾಜದಲ್ಲಿರುವ ಪ್ರತಿಯೊಬ್ಬರು ಶಾಂತಿ, ನೆಮ್ಮದಿಯಿಂದ ಬದುಕುವುದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವ ಕಾರ್ಯವನ್ನು ಪೊಲೀಸ್‌ ಇಲಾಖೆ ಈಗಾಗಲೇ ಮಾಡುತ್ತಿದೆ ಎಂದರು.

ಲಿಂಗಸುಗೂರು, ದೇವದುರ್ಗ ಹಾಗೂ ಸಿರವಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮಟ್ಕಾ, ಜೂಜಾಟ ಹಾಗೂ ಕೊಲೆ ಯತ್ನ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಅಪರಾಧಗಳಲ್ಲಿ ಅನೇಕರು ಜೈಲು ವಾಸ ಅನುಭವಿಸಿದ್ದಾರೆ. ಕಾನೂನಿನ ವಿರುದ್ಧ ನಡೆದುಕೊಂಡು ತಪ್ಪು ಮಾಡಿದವರು ಜೀವನಪೂರ್ತಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯುವಕರು ಮಾದಕ ಸರಕುಗಳಿಗೆ ಬಲಿಯಾಗುತ್ತಿದ್ದಾರೆ. ಅಡ್ಡಾದಿಡ್ಡಿ ವಾಹನಗಳ ಚಾಲನೆ ಅತೀಯಾಗಿದೆ. ಇದರಿಂದ ಅಪಘಾತ ಘಟನೆಗಳು ನಡೆದು ಜೀವಹಾನಿ ಸಂಭವಿಸುತ್ತಿವೆ. ವಿದ್ಯಾರ್ಥಿ ದೆಸೆಯಲ್ಲಿ ಕೊಲೆ ಮಾಡುವುದು ಅಥವಾ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದರೆ, ಮುಂದೆ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೆ, ಪಾಸ್‌ಪೋರ್ಟ್‌ ಕೂಡಾ ಪಡೆಯುವುದಕ್ಕೆ ಆಗುವುದಿಲ್ಲ ಎಂಬುದನ್ನು ನೆನಪಿಡಬೇಕು ಎಂದು ತಿಳಿಸಿದರು.

ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು. ಅಪರಾಧ ಕೃತ್ಯ ಎಸಗುವುದರಿಂದ ಭವಿಷ್ಯ ಹಾಳಾಗುತ್ತದೆ. ಹಿಂದಿನ 10 ವರ್ಷಗಳಿಂದ ರೌಡಿ ಶೀಟರ್‌ ಪಟ್ಟಿಯಲ್ಲಿರುವವರ ನಡವಳಿಕೆ ಹಾಗೂ ಬದಲಾವಣೆ ಆಗಿರುವುದನ್ನು ಪರಿಶೀಲಿಸಲಾಗುವುದು. ಉತ್ತಮ ನಡವಳಿಕೆ ಕಂಡುಬಂದರೆ ಪ್ರಕರಣದಿಂದ ಮುಕ್ತಿ ದೊರಕಿಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಬಾಲಕ, ಬಾಲಕಿಯರ ಮೇಲೆ ಅಪರಾಧಗಳನ್ನು ಎಸಗಿದರೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೀವನ ಪೂರ್ತಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT