ಮಂಗಳವಾರ, ಸೆಪ್ಟೆಂಬರ್ 17, 2019
21 °C
ರಾಯರಿಗೆ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ

ಮಂತ್ರಾಲಯ: ರಾಯರ ಮಧ್ಯಾರಾಧನೆ ಸಂಭ್ರಮ

Published:
Updated:
Prajavani

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಮಧ್ಯಾರಾಧನೆಯ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು.

ತಿರುಮಲ ತಿರುಪತಿಯಿಂದ ತರಲಾಗಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಟಿಟಿಡಿ ಆಡಳಿತಾಧಿಕಾರಿ ಶೇಷವಸ್ತ್ರವನ್ನು ತಲೆ ಮೇಲೆ ಹೊತ್ತು ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು. ನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅದನ್ನು ತಲೆ ಮೇಲಿಟ್ಟುಕೊಂಡು ರಾಯರ ಸನ್ನಿಧಿಗೆ ತೆಗೆದುಕೊಂಡು ಹೋದರು.

ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಫಲಪುಷ್ಪಗಳಿಂದ ಅಲಂಕಾರ ಮಾಡಲಾಯಿತು.

ಭಕ್ತರ ಹರ್ಷೋದ್ಗಾರದ ನಡುವೆ ಸುವರ್ಣ ರಥೋತ್ಸವ ನಡೆಯಿತು. ಚಂಡೆ, ಮದ್ದಳೆ ವಾದ್ಯಗಳ ವೈಭವವು ಮಹೋತ್ಸವದ ಕಳೆಯನ್ನು ಹೆಚ್ಚಿಸಿತು. ನಟರಾದ ಜಗ್ಗೇಶ್‌ ಹಾಗೂ ಕೋಮಲ್‌ ಸಹ ರಾಯರ ದರ್ಶನ ಪಡೆದರು. 

ಮಹಾ ರಥೋತ್ಸವ ಇಂದು: ರಾಯರ ಆರಾಧನಾ ಮಹೋತ್ಸವದ ಉತ್ತರಾರಾಧನೆ ದಿನವಾದ ಭಾನುವಾರ ಮಹಾ ರಥೋತ್ಸವ ನಡೆಯುವುದು. ಮಠದಿಂದ ಮುಖ್ಯ ರಸ್ತೆವರೆಗೂ ರಥೋತ್ಸವ ಸಾಗಲಿದೆ. 

ಸಂತ್ರಸ್ತರ ರಕ್ಷಣೆಗೆ ಪ್ರಾರ್ಥನೆ: ನಟರಾದ ಜಗ್ಗೇಶ್‌ ಹಾಗೂ ಕೋಮಲ್‌ ಅವರು ರಾಯರ ಮಠಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್‌, ‘ನೆರೆ ಹಾವಳಿಯಿಂದ ಬಹಳಷ್ಟು ಜನರು ತೊಂದರೆಗೆ ಸಿಲುಕಿದ್ದು, ಸಂತ್ರಸ್ತರನ್ನು ರಕ್ಷಿಸುವಂತೆ ರಾಯರನ್ನು ಪ್ರಾರ್ಥಿಸಿದ್ದೇನೆ’ ಎಂದು ಹೇಳಿದರು.

‘ಕನ್ನಡ ಚಿತ್ರರಂಗದಲ್ಲಿದ್ದವರಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎನ್ನುವ ಭೇದ ಇರುವುದಿಲ್ಲ.
ಸಂಕಷ್ಟ ಎದುರಾದಾಗ ಎಲ್ಲರಿಗೂ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

Post Comments (+)