ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯ

7
ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸತ್ರ ನ್ಯಾ. ಬೈಲೂರು ಶಂಕರರಾಂ ಹೇಳಿಕೆ

ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯ

Published:
Updated:
Deccan Herald

ರಾಯಚೂರು: ಪೊಲೀಸರು ಹಾಗೂ ಸೈನಿಕರು ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಂ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕರ್ತವ್ಯ ನಿಭಾಯಿಸುವುದರ ಜೊತೆಗೆ ಸಮಯ ಹೊಂದಾಣಿಕೆ ಮಾಡಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ದೊಡ್ಡ ಸವಾಲು. ಶಿಸ್ತು ಮೈಗೂಡಿಸಿಕೊಳ್ಳಲು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪೊಲೀಸ್‌ ಇಲಾಖೆಯು ಶಿಸ್ತಿನಿಂದ ಹೆಸರು ಪಡೆದಿದ್ದರೂ, ಇತ್ತೀಚಿಗೆ ಸ್ವಲ್ಪ ಅಶಿಸ್ತು ಕಾಣಿಸುತ್ತಿದೆ ಎಂದು ತಿಳಿಸಿದರು.

ಉತ್ತಮ ಸೇವೆ ಸಲ್ಲಿಸಲು ಸದೃಢ ದೇಹ ಬೇಕಾಗುತ್ತದೆ. ಯಾವುದೇ ಒತ್ತಡ, ಕರ್ತವ್ಯದ ಕರೆಯಿದ್ದರೂ ಬಿಡುವ ಮಾಡಿಕೊಂಡು ಕ್ರೀಡಾಂಗಣಕ್ಕೆ ಬರಬೇಕು. ಇದರಿಂದ ದಕ್ಷತೆ ಕೂಡಾ ವದ್ಧಿಯಾಗುತ್ತದೆ ಎಂದು ಹೇಳಿದರು.

ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಂ. ಮಹಾದೇವಯ್ಯ, ಪೊಲೀಸರು 24 ಗಂಟೆಯೂ ಕರ್ತವ್ಯ ನಿಭಾಯಿಸುವ ಅನಿವಾರ್ಯತೆ ಇರುತ್ತದೆ. ಹೀಗಾಗಿ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಗಮನ ಹರಿಸಬೇಕು. ಕ್ರೀಡಾ ಸ್ಫೂರ್ತಿ ಬೆಳೆಸುವ ಉದ್ದೇಶಕ್ಕಾಗಿಯೆ ಇಲಾಖೆಯು ಕ್ರೀಡಾಕೂಟಗಳನ್ನು ಆಯೋಜಿಸಿ, ಪೊಲೀಸರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ. ಯಾವುದಾದರೂ ಕ್ರೀಡೆಯನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತಿರಬೇಕಾಗುತ್ತದೆ. ಅಭ್ಯಾಸ ಮಾಡಿದವರು ಕ್ರೀಡಾಕೂಟದಲ್ಲಿ ಜಯಶಾಲಿಗಳಾತ್ತಾರೆ ಎಂದು ತಿಳಿಸಿದರು.

ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳಿವೆ. ಶಿಸ್ತಿನ ಜೀವನ ರೂಪಿಸಿಕೊಳ್ಳುವುದರ ಜೊತೆಗೆ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಪೊಲೀಸರು ಕಠಿಣ ಸನ್ನಿವೇಶದಲ್ಲಿ ಮತ್ತು ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ಎಲ್ಲವನ್ನು ಎದುರಿಸಿ ಆರೋಗ್ಯ ಕಾಪಾಡಿಕೊಳ್ಳಲು ಪೊಲೀಸರು ಕ್ರೀಡಾಂಗಣಕ್ಕೆ ಹೋಗುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರಬಾಬು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಪಾಟೀಲ ಇದ್ದರು.
ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಿಂದ ಪೊಲೀಸ್‌ ಇಲಾಖೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !