ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS | ಮಿಂಚಿದ ಮ್ಯಾಕ್ಸ್‌ವೆಲ್; ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಜಯ

Published 27 ಸೆಪ್ಟೆಂಬರ್ 2023, 16:08 IST
Last Updated 27 ಸೆಪ್ಟೆಂಬರ್ 2023, 16:08 IST
ಅಕ್ಷರ ಗಾತ್ರ

ರಾಜ್‌ಕೋಟ್: ಆತಿಥೇಯ ಭಾರತ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಆಸ್ಟ್ರೇಲಿಯಾ ತಂಡ ಅಂತಿಮ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗದಿಂದ ಪಾರಾಯಿತು.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಡೆ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 352 ರನ್ ಕಲೆಹಾಕಿತು. ಬೃಹತ್‌ ಗುರಿ ಬೆನತ್ತಿದ ಭಾರತ, ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 286 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ವಾಷಿಂಗ್ಟನ್ ಸುಂದರ್ (18) ಉತ್ತಮ ಆರಂಭ ನೀಡಿದರು. ರೋಹಿತ್ ವೇಗವಾಗಿ ರನ್‌ ಗಳಿಸಿದರೆ, ಸುಂದರ್ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 10.5 ಓವರ್‌ಗಳಲ್ಲಿ 74 ರನ್ ಕಲೆಹಾಕಿತು.

ಸುಂದರ್ ಔಟಾದ ನಂತರವೂ ರೋಹಿತ್ ಬೀಸಾಟ ಮುಂದುವರಿಯಿತು. ಅವರು ಕೇವಲ 57 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 81 ರನ್ ಗಳಿಸಿ ಔಟಾದರು. ಮತ್ತೊಂದು ತುದಿಯಲ್ಲಿ ಸೊಗಸಾಗಿ ಬ್ಯಾಟ್ ಬೀಸಿದ ಅನುಭವಿ ವಿರಾಟ್‌ ಕೊಹ್ಲಿ (56 ರನ್‌) ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ 66ನೇ ಅರ್ಧಶತಕ ಸಿಡಿಸಿದರು. ಆದರೆ, ಅರ್ಧಶತಕದ ಬಳಿಕ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಶ್ರೇಯಸ್‌ ಅಯ್ಯರ್‌ 48 ರನ್ ಗಳಿಸಿ ಔಟಾದರು. ಮೊದಲೆರಡು ಪಂದ್ಯಗಳಲ್ಲಿ ಮಿಂಚಿದ್ದ ಕೆ.ಎಲ್‌.ರಾಹುಲ್‌ (26) ಹಾಗೂ ಸೂರ್ಯಕುಮಾರ್‌ ಯಾದವ್‌ (8) ಆಟ ಇಲ್ಲಿ ನಡೆಯಲಿಲ್ಲ. ರವೀಂದ್ರ ಜಡೇಜ (35) ಕೊನೆಯಲ್ಲಿ ಹೋರಾಟ ನಡೆಸಿದರೂ ಭಾರತಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ರೋಹಿತ್, ಕೊಹ್ಲಿ, ಅಯ್ಯರ್‌ ಹಾಗೂ ಸುಂದರ್‌ ಅವರ ವಿಕೆಟ್‌ಗಳನ್ನು ಕಬಳಿಸಿದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರು. ಉಳಿದಂತೆ ಜೋಶ್ ಹ್ಯಾಜಲ್‌ವುಡ್‌ ಎರಡು ವಿಕೆಟ್‌ ಕಿತ್ತರೆ, ಮಿಚೇಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಕ್ಯಾಮರಾನ್‌ ಗ್ರೀನ್‌ ಹಾಗೂ ತನ್ವೀರ್ ಸಂಗಾ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ಹೀಗಾಗಿ ಭಾರತ 66 ರನ್ ಅಂತರದ ಸೋಲೊಪ್ಪಿಕೊಂಡಿತು.

ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಅಬ್ಬರ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಭಾರತದ ಬೌಲರ್‌ಗಳ ಎದುರು ಅಕ್ಷರಶಃ ಅಬ್ಬರಿಸಿದರು. ಡೇವಿಡ್ ವಾರ್ನರ್‌, ಮಿಚೇಲ್‌ ಮಾರ್ಷ್‌, ಸ್ಟೀವ್‌ ಸ್ಮಿತ್‌ ಹಾಗೂ ಮಾರ್ನಸ್‌ ಲಾಬುಶೇನ್‌ ಬಿರುಸಿನ ಅರ್ಧಶತಗಳನ್ನು ಗಳಿಸಿ ಮಿಂಚಿದರು.

ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ವಾರ್ನರ್‌ ಹಾಗೂ ಮಾರ್ಷ್‌ ಮೊದಲ ವಿಕೆಟ್‌ಗೆ ಕೇವಲ 8 ಓವರ್‌ ಆಗುವಷ್ಟರಲ್ಲೇ 78 ರನ್ ಕಲೆಹಾಕಿದರು. ಕೇವಲ 34 ಎಸೆತಗಳನ್ನು ಎದುರಿಸಿದ ವಾರ್ನರ್‌ 6 ಬೌಂಡರಿ ಮತ್ತು 4 ಸಿಕ್ಸರ್‌ಗಳಿದ್ದ 56 ರನ್ ಗಳಿಸಿ ಔಟಾದರು.

ವಾರ್ನರ್‌ ವಿಕೆಟ್‌ ಪತನದ ಬಳಿಕ ಬಂದ ಅನುಭವಿ ಸ್ಮಿತ್‌ ಜೊತೆಗೂಡಿ ಮಾರ್ಷ್‌ ಜೊತೆಗೂಡಿ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 137 ರನ್‌ ಕಲೆಹಾಕಿದರು. 84 ಎಸೆತಗಳಲ್ಲಿ 96 ರನ್ ಗಳಿಸಿದ್ದ ಮಾರ್ಷ್‌ ಶತಕದ ಹೊಸ್ತಿಲಲ್ಲಿ ವಿಕೆಟ್‌ ಒಪ್ಪಿಸಿದರು.

ಸೊಗಸಾಗಿ ಬ್ಯಾಟ್ ಬೀಸಿದ ಸ್ಮಿತ್‌ (74 ರನ್) 30ನೇ ಅರ್ಧಶತಕ ಗಳಿಸಿದರು. ಕೊನೆಯಲ್ಲಿ ಗುಡುಗಿದ ಲಾಬುಶೇನ್‌ (72 ರನ್) 49ನೇ ಓವರ್‌ನ ಕೊನೇ ಎಸೆತದಲ್ಲಿ ಔಟಾದರು. ಹೀಗಾಗಿ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT