ಕೀಟನಾಶಕ ಔಷಧಿ ಸಿಂಪರಣೆ ಸರಿಯಾಗಿರಲಿ

7
ಪೀಡೆನಾಶಕಗಳ ಅವಶೇಷ ಮತ್ತು ಆಹಾರ ಗುಣ ವಿಶ್ಲೇಷಣೆ ಪ್ರಯೋಗಾಲಯದಿಂದ ಸಲಹೆ

ಕೀಟನಾಶಕ ಔಷಧಿ ಸಿಂಪರಣೆ ಸರಿಯಾಗಿರಲಿ

Published:
Updated:
Deccan Herald

ರಾಯಚೂರು: ಜಿಲ್ಲೆಯ ವಿವಿಧೆಡೆ ರೈತರು ಬೆಳೆದಿರುವ ಗೋವಿನಜೋಳ ಮತ್ತು ಬಿಳಿಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದರಿಂದ ಕೃಷಿ ವಿಜ್ಞಾನಿಗಳು ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ, ಔಷಧಿ ಸಿಂಪರಿಸಲು ಶಿಫಾರಸು ಮಾಡಿದ್ದರು. ಆದರೆ, ಔಷಧಿ ಸಿಂಪರಣೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆಯೂ ರೈತರು ಗಮನ ಹರಿಸಬೇಕಿದೆ.

ಸೂಕ್ತ ಸಮಯದಲ್ಲಿ ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದ್ದ ಔಷಧಿಯನ್ನು ಬಹಳಷ್ಟು ರೈತರು ಸಿಂಪರಣೆ ಮಾಡಿದ್ದರಿಂದ ಸೈನಿಕ ಹುಳುವಿನ ಬಾಧೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಆದರೆ, ಈಗ ಹತ್ತಿಯ ಬೆಳೆಯಲ್ಲಿ ಗುಲಾಬಿ ಕಾಯಿಕೊರಕ ಹುಳುವಿನ ಕಾಟ ಶುರುವಾಗಿದೆ. ಸಮರ್ಪಕ ಮಳೆಯಿಲ್ಲದೆ ಬೆಳೆದಿರುವ ಹತ್ತಿಯನ್ನು ಗುಲಾಬಿ ಕಾಯಿಕೊರಕ ಹುಳು ನಾಶಗೊಳಿಸಲು ಸಜ್ಜಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಔಷಧಿ ಸಿಂಪರಣೆ ಮಾಹಿತಿ ಇರುವ ರೈತರೆಲ್ಲ ಬೆಳೆ ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸೂಕ್ತ ಔಷಧಿ ಸಿಂಪರಣೆ ಮಾಡುತ್ತಿದ್ದಾರೆ.

‘ಸೈನಿಕ ಹುಳು ಅಥವಾ ಗುಲಾಬಿ ಕಾಯಿಕೊರಕ ಹುಳುವನ್ನು ಸಾಯಿಸುವ ಔಷಧಿ ಬಗ್ಗೆ ಮಾತ್ರ ಮಾಹಿತಿ ಪಡೆದುಕೊಂಡರೆ ಸಾಕಾಗುವುದಿಲ್ಲ. ಸಿಂಪರಣೆಯು ಯಾವ ರೀತಿಯಲ್ಲಿರಬೇಕು ಎಂಬುದರ ಬಗ್ಗೆಯೂ ರೈತರು ಆದ್ಯತೆ ವಹಿಸಬೇಕಾಗುತ್ತದೆ. ಕೃಷಿಯಲ್ಲೆ ಪಳಗಿರುವ ರೈತರು ಹುಳುಗಳ ಇರುವಿಕೆ ಗಮನಿಸಿಕೊಂಡು ಸಹನೆಯಿಂದ ಔಷಧಿ ಸಿಂಪರಣೆ ಮಾಡಿಕೊಳ್ಳುತ್ತಾರೆ. ಇದರಿಂದ ಹೊಲದಲ್ಲಿರುವ ಹುಳುಗಳನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದುಕೊಳ್ಳುತ್ತಾರೆ. ಹೇಳಿದ ಔಷಧಿ ಸಿಂಪರಣೆ ಮಾಡಿದರಾಯಿತು ಎಂದು ಕೆಲವು ರೈತರು ಅಂದುಕೊಂಡರೆ, ತಪ್ಪಾಗುತ್ತದೆ’ ಎನ್ನುತ್ತಾರೆ ಪೀಡೆನಾಶಕಗಳ ಅವಶೇಷ ಮತ್ತು ಆಹಾರ ಗುಣ ವಿಶ್ಲೇಷಣೆ ಪ್ರಯೋಗಾಲಯದ ಮುಖ್ಯಸ್ಥ ಡಾ. ಎಂ.ಭೀಮಣ್ಣ ಅವರು.

ಔಷಧಿಯನ್ನು ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಮಾತ್ರ ಔಷಧಿ ಸಿಂಪರಣೆ ಮಾಡಬೇಕು. ಒಬ್ಬ ವ್ಯಕ್ತಿ ಎರಡು ತಾಸು ಮಾತ್ರ ಔಷಧಿ ಸಿಂಪರಿಸಬೇಕು. ಎರಡಕ್ಕಿಂತ ಹೆಚ್ಚು ಅವಧಿ ಔಷಧಿಯನ್ನು ಉಸಿರಾಡಿದರೆ ಆರೋಗ್ಯದಲ್ಲಿ ಏರುಪೇರು ಶುರುವಾಗುತ್ತದೆ. ಔಷಧಿ ಸಿಂಪರಿಸುವುದಕ್ಕೆ ಗುತ್ತಿಗೆ ಪಡೆಯುವ ಕಾಲಿಕಾರ್ಮಿಕರು ತುಂಬಾ ಎಚ್ಚರಿಕೆ ವಹಿಸಬೇಕು. ಹಣ ಪಡೆಯಬೇಕು ಎನ್ನುವ ಧಾವಂತದಲ್ಲಿ ಅಪಾಯ ತಂದುಕೊಳ್ಳಬಾರದು ಎನ್ನುವುದು ವಿಜ್ಞಾನಿಗಳ ಸಲಹೆ.

ಗುಲಾಬಿ ಕಾಯಿಕೊರಕ ಹಾವಳಿ: ಜಿಲ್ಲೆಯಲ್ಲಿ 2015 ರಿಂದ ಬಿಟಿ ಹತ್ತಿ ಬೆಳೆಗೆ ಗುಲಾಬಿ ಕಾಯಿಕೊರಕದ ಹಾವಳಿ ಆರಂಭವಾಗಿದೆ. ಮೊದಲ ವರ್ಷ ಸಾವಿರಾರು ರೈತರು ನಷ್ಟ ಅನುಭವಿಸಿದ್ದರು. ಈ ವರ್ಷ ಮತ್ತೆ ಗುಲಾಬಿ ಕಾಯಿಕೊರಕ ಕಾಣಿಸಿಕೊಂಡಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ವಿವಿಧೆಡೆ 85,090 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆಯ ಗುರಿಯನ್ನು ಹೊಂದಲಾಗಿತ್ತು. ಈ ಪೈಕಿ 47,822 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹತ್ತಿ ಬಿತ್ತನೆ ಆಗಿದೆ. ಬರಗಾಲ ಆವರಿಸಿದ್ದರಿಂದ ಸಾಕಷ್ಟು ಹತ್ತಿ ಬೆಳೆಯು ಈಗಾಗಲೇ ನಾಶವಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲೂ ಹತ್ತಿ ಬಿತ್ತನೆ ಮಾಡಲಾಗಿತ್ತು. ಸಮರ್ಪಕ ನೀರಿಲ್ಲದೆ ಹತ್ತಿ ಗಿಡಗಳು ಬೆಳೆದಿಲ್ಲ. ಅಳಿದುಳಿದ ಬೆಳೆಯನ್ನು ಸಹ ನಾಶಮಾಡಲು ಗುಲಾಬಿ ಕಾತಿಕೊರಕದ ಬಾಧೆ ಶುರುವಾಗಿದೆ.

ಪ್ರಮುಖವಾಗಿ ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿರುವ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕುಗಳಲ್ಲಿ ಪ್ರಸಕ್ತ ಹಿಂಗಾರಿನಲ್ಲಿ ಬೆಳೆದ ಹತ್ತಿ ಬೆಳೆಯು ರೈತರ ಕೈ ಸೇರಬೇಕಿದೆ. ಆದರೆ, ಈ ಸಂದರ್ಭದಲ್ಲಿ ಸಮಯದಲ್ಲಿ ಗುಲಾಬಿ ಕಾಯಿಕೊರಕ ಕೀಟ ಬಾಧೆಯು ರೈತರನ್ನು ಚಿಂತೆಗೆ ಸಿಲುಕಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !