ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದ ಮಾಲಿನ್ಯದಿಂದ ಜನರಿಗೆ ತೊಂದರೆ

ನಿರಂತರ ನಿಯಮ ಉಲ್ಲಂಘಿಸುವ ವಾಹನ ಸವಾರರು– ಕ್ರಮ ಕೈಗೊಳ್ಳದ ಅಧಿಕಾರಿಗಳು
Last Updated 23 ಏಪ್ರಿಲ್ 2018, 12:40 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಸಂಚಾರ ದಟ್ಟಣೆ, ವಾಯು ಮಾಲಿನ್ಯ ಹೆಚ್ಚುತ್ತಿರುವ ಜತೆಜತೆಗೆ ಶಬ್ಬ ಮಾಲಿನ್ಯವೂ ಹೆಚ್ಚಾಗುತ್ತಿದ್ದು, ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ಇಲ್ಲಿನ ಜಾಲಮಂಗಲದ ರಸ್ತೆ, ಎಂ.ಜಿ. ರಸ್ತೆ, ರಾಯರದೊಡ್ಡಿ ರಸ್ತೆ ಸೇರಿದಂತೆ ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿ ಮಿತಿಮೀರಿದ ಕರ್ಕಶ ಹಾರ್ನ್‌ ಬಳಕೆ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಜನವಸತಿ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳಿರುವ ಹಾಗೂ ಆಸ್ಪತ್ರೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಿತಿಮೀರಿದ ಶಬ್ದದ ಹಾವಳಿಯಿಂದಾಗಿ ನಾಗರಿಕರು ಹೈರಾಣಾಗಿದ್ದಾರೆ ಎಂದು ದೂರುತ್ತಾರೆ ತ್ಯಾಗರಾಜ್‌.

ನಿಯಮ ಉಲ್ಲಂಘನೆ: ಬೈಕ್‌, ಕಾರು, ಲಾರಿ, ಬಸ್‌ ಹೀಗೆ ಎಲ್ಲ ಮಾದರಿಯ ವಾಹನಗಳಲ್ಲೂ ಹಾರ್ನ್‌ ಪ್ರಮಾಣ ಇಂತಿಷ್ಟೇ ಇರಬೇಕು ಎಂದು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ಕೈಗಾರಿಕಾ ಪ್ರದೇಶ, ಜನವಸತಿ ಜಾಗ, ವಾಣಿಜ್ಯ ಪ್ರದೇಶ, ನಿಶ್ಶಬ್ದ ವಲಯಗಳಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ವಾಹನಗಳ ಹಾರ್ನ್‌ಬಳಕೆಯ ಪ್ರಮಾಣ ಇಂತಿಷ್ಟು ಎಂದು ನಿಗದಿಗೊಳಿಸಲಾಗಿದೆ. ಆದರೆ, ಈ ನಿಯಮಗಳನ್ನು ಮಾತ್ರ ವಾಹನ ಸವಾರರು ಪಾಲಿಸುತ್ತಿಲ್ಲ.

ವಾಹನಗಳಲ್ಲಿ ನಿಯಮ ಮೀರಿ ಕರ್ಕಶ ಶಬ್ದ ಬಳಕೆ ಹೆಚ್ಚುತ್ತಿರುವ ಪರಿಣಾಮ ವೃದ್ಧರು, ಮಕ್ಕಳು, ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರಿಗೆ ಹೆಚ್ಚು ತೊಂದರೆಯಾಗಿದೆ. ಇದ್ದಕ್ಕಿದ್ದಂತೆ ಎರಗುವ ಕರ್ಕಶ ಶಬ್ದದಿಂದ ಮಾನಸಿಕ ಅನಾರೋಗ್ಯ ಎದುರಾದ ಉದಾಹರಣೆಗಳಿವೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವರಾಜ್.

ಯುವಕರಲ್ಲಿ ಹೆಚ್ಚುತ್ತಿರುವ ಹಾರ್ನ್‌ ಮೋಹ ಶಬ್ದ ಮಾಲಿನ್ಯ ಹೆಚ್ಚಾಗಲು ಕಾರಣ. ವಾಹನ ತಯಾರಿಕಾ ಕಂಪನಿಗಳು ಅಳವಡಿಸುವ ಕಿಟ್‌ಗಳನ್ನು ತೆಗೆದು ಹಾಕಿ, ಹೆಚ್ಚು ಶಬ್ದವನ್ನು ಹೊರಹಾಕುವ ಹಾರ್ನ್‌ ಅಳವಡಿಸಿಕೊಳ್ಳುತ್ತಿದ್ದಾರೆ. ಇತರರ ಗಮನವನ್ನು ಸೆಳೆಯಲು ಯುವಕರು ಕರ್ಕಶ ಹಾರ್ನ್‌ ಬಳಸುತ್ತಿದ್ದು, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎನ್ನುತ್ತಾರೆ ಕೆ. ಲೋಕೇಶ್.

ಈಗಾಗಲೇ ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಿದ್ದು, ಶಬ್ದ ಮಾಲಿನ್ಯವೂ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕರ್ಕಶ ಶಬ್ದ ಬಳಸುವ ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸಬೇಕು ಎನ್ನುತ್ತಾರೆ ಭರತ್‌ ಗೌಡ.

ಖಾಸಗಿ ಬಸ್‌ ಹಾವಳಿ

ಪ್ರಮುಖವಾಗಿ ಖಾಸಗಿ ಬಸ್, ಲಾರಿ, ಟ್ರ್ಯಾಕ್ಟರ್, ಗೂಡ್ಸ್ ವಾಹನಗಳಲ್ಲಂತೂ ಕರ್ಕಶ ಶಬ್ದ ಬಳಕೆ ಹೆಚ್ಚಾಗಿದೆ ಎನ್ನುತ್ತಾರೆ ಬೈಕ್ ಸವಾರ ನಾಗರಾಜು. ರಸ್ತೆಯಲ್ಲಿ ಹೋಗುವಾಗ ಏಕಾಏಕಿ ಹಾರನ್‌ ಬಳಕೆಯಿಂದ ಇತರ ವಾಹನ ಸವಾರರು ಗಲಿಬಿಲಿಗೊಂಡು ಅಪಘಾತ ಮಾಡಿಕೊಂಡ ಉದಾಹರಣೆಗಳು ಇವೆ. ಹಾಗಾಗಿ, ಭಾರಿ ವಾಹನಗಳ ಕರ್ಕಶ ಹಾರ್ನ್‌ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ತಿಳಿಸಿದ್ದಾರೆ.

–ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT