ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರ ವರ್ಗಾವಣೆಗೆ ವಿರೋಧ
Last Updated 24 ನವೆಂಬರ್ 2021, 11:31 IST
ಅಕ್ಷರ ಗಾತ್ರ

ಕವಿತಾಳ: ಉಪನ್ಯಾಸಕರ ವರ್ಗಾವಣೆ ವಿರೋಧಿಸಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ತರಗತಿ ಬಹಿಷ್ಕರಿಸಿ ದಿಢೀರ್‌ ಪ್ರತಿಭಟನೆ ನಡೆಸಿದರು.

‘ಪಿಯು ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ಅಂದಾಜು 252 ಮಕ್ಕಳು ಅಭ್ಯಾಸ ಮಾಡುತ್ತಿದ್ದು ಇಲ್ಲಿನ ಉಪನ್ಯಾಸಕರನ್ನು ವಾರದಲ್ಲಿ ಮೂರು ದಿನ ಅತಿಥಿ ಉಪನ್ಯಾಸಕರನ್ನಾಗಿ ಬೇರೆಡೆ ಕಳುಹಿಸಲಾಗುತ್ತಿದೆ. ಇದರಿಂದ ತಮಗೆ ಕಲಿಕೆಗೆ ತೊಂದರೆಯಾಗುತ್ತಿದೆ. ಇದೀಗ ಇಂಗ್ಲಿಷ್‍ ವಿಷಯ ಬೋಧಿಸುವ ಉಪನ್ಯಾಸಕರನ್ನು ಎರವಲು ಸೇವೆ ಮೇಲೆ ಬೇರೆಡೆ ವರ್ಗಾವಣೆ ಮಾಡಿದ್ದು ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬಾರದು’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

‘ಕುರುಕುಂದಿ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯರು ರಜೆ ಮೇಲೆ ತೆರಳಿದ್ದು ಅವರ ಸ್ಥಾನಕ್ಕೆ ಇಲ್ಲಿನ ಇಂಗ್ಲಿಷ್‍ ಉಪನ್ಯಾಸಕರನ್ನು ನೇಮಿಸಿ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಇದೀಗ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸುತ್ತಿರುವುದು ಗೊಂದಲ ಮೂಡಿಸಿದೆ. ವಿದ್ಯಾರ್ಥಿಗಳ ಅಭಿಪ್ರಾಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವುದು‘ ಎಂದು ಪ್ರಾಚಾರ್ಯೆ ಶಕುಂತಲಾ ಹೇಳಿದರು.

‘ಇಲ್ಲಿನ ಕಾಲೇಜಿಗೆ ದಶಕಗಳ ಕಾಲ ಕಾಯಂ ಉಪನ್ಯಾಸಕರು ಇರಲಿಲ್ಲ ಇದೀಗ ಹೊಸದಾಗಿ ನೇಮಕವಾಗಿ ಬಂದ ಉಪನ್ಯಾಸಕರನ್ನು ಬೇರೆಡೆ ಕಳುಹಿಸಲಾಗುತ್ತಿದೆ. ಬೇರೆ ಪಟ್ಟಣಗಳಿಗೆ ಹೋಗಲು ಸಾಧ್ಯವಾಗದ ಬಡ ಮಕ್ಕಳು ಇಲ್ಲಿ ಓದತ್ತಿದ್ದು ಅವರ ಕಲಿಕೆಗೆ ಹಿನ್ನೆಡೆಯಾಗುತ್ತಿದೆ. ಈ ಕುರಿತು ಡಿಡಿಪಿಯು ಅವರಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಮಕ್ಕಳು ಅನಿವಾರ್ಯವಾಗಿ ಪ್ರತಿಭಟನೆ ನಡೆಸುವಂತಾಗಿದೆ’ ಎಂದು ಪಾಲಕ ವೆಂಕಟೇಶ ಅರಿಕೇರಿ ಹೇಳಿದರು.

ಈ ಉಪನ್ಯಾಸಕರನ್ನು ವಾರದಲ್ಲಿ ಆರು ದಿನ ಎರವಲು ಸೇವೆಗೆ ನಿಯೋಜಿಸಿದ ಆದೇಶ ರದ್ದುಮಾಡಿ ವಾರದಲ್ಲಿ ಮೂರು ದಿನ ಇಲ್ಲಿನ ಕಾಲೇಜಿನಲ್ಲಿಯೇ ಅವಕಾಶ ಕಲ್ಪಿಸುವುದಾಗಿ ಅಧಿಕಾರಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ತರಗತಿಗೆ ಹಾಜರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT