ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪುಸ್ತಕದಲ್ಲಿ ಕೃಷಿ ವಿಷಯ ಅಳವಡಿಸಿ: ಉಜ್ಜಯಿನಿ ಶ್ರೀ

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಸಮಾರೋಪ ಇಂದು
Last Updated 17 ಜೂನ್ 2019, 14:10 IST
ಅಕ್ಷರ ಗಾತ್ರ

ರಾಯಚೂರು:ಯುವ ಪೀಳಿಗೆಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಉದ್ದೇಶಕ್ಕಾಗಿ ಒಂದನೇ ತರಗತಿಯಿಂದ ಪಿಯುಸಿವರೆಗಿನ ಪಠ್ಯಕ್ರಮದಲ್ಲಿ ಪ್ರತ್ಯೇಕವಾಗಿ ಕೃಷಿ ವಿಷಯ ಅಳವಡಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ನಗರದ ಎಪಿಎಂಸಿ ರಾಜೇಂದ್ರ ಗಂಜ್‌ ಆವರಣದಲ್ಲಿ ಮುನ್ನುರುಕಾಪು ಸಮಾಜದಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಸೋಮವಾರ ನಡೆದ ಎರಡನೇ ದಿನಗಳ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಈ ಬಗ್ಗೆ ಕ್ರಮ ವಹಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರಗಳನ್ನು ಬರೆಯಲಾಗಿದೆ. ಕೃಷಿಯನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರಿಂದ ರೈತರು ಮತ್ತು ಕೃಷಿ ಕ್ಷೇತ್ರವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಮಾನವ ಕುಲಕ್ಕೆ ಅನ್ನ ನೀಡುವ ಕೃಷಿಯನ್ನು ನಿಕೃಷ್ಟವಾಗಿ ನೋಡಬಾರದು. ಅನ್ನದಾತರಿಗೆ ಗೌರವ ಕೊಡಬೇಕು. ರಾಯಚೂರಿನಲ್ಲಿ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ಹಬ್ಬವು ಜಾತಿ, ಧರ್ಮ ಎಲ್ಲೆ ಮೀರಿ ಆಯೋಜಿಸಲಾಗಿದೆ. ರಾಯಚೂರಿನ ಪ್ರತಿನಿಧಿಯಂತೆ ನಾಡಿನಾದ್ಯಂತ ಇದು ಪ್ರಸಿದ್ಧಿ ಪಡೆಯುತ್ತಿದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಶ್ರೀಶೈಲದ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾತನಾಡಿ, ರಾಯಚೂರು ಹಬ್ಬವು ಜಾನುವಾರುಗಳ ಪಾಲನೆ, ಪೋಷಣೆಯನ್ನು ಜಾಗೃತಗೊಳಿಸುವ ಹಬ್ಬವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿ ಮಾಡಬೇಕು. ಗ್ರಾಮೀಣರ ಬದುಕಿಗೆ ಅತ್ಯಂತ ಹತ್ತಿರವಾದ ಎತ್ತುಗಳನ್ನು ಸಂರಕ್ಷಿಸಬೇಕು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎತ್ತುಗಳು ಕಟ್ಟುಮಸ್ತಾಗಿದ್ದು, ಗಾತ್ರ, ಆಕಾರದಿಂದ ಆಕರ್ಷಕವಾಗಿವೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಕೃಷಿ ಮಹತ್ವ ಸಾರಿದಂತಾಗುತ್ತದೆ. ಪಶು ಪಾಲನೆ ಮಾಡುವುದನ್ನೆ ಪರೋಕ್ಷವಾಗಿ ಪ್ರೇರಣೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಎಲೆಬಿಚ್ಚಾಲಿ ಮಠದ ವೀರಭದ್ರ ಸ್ವಾಮೀಜಿ, ಮುಂಗಾರು ಉತ್ಸವದ ರೂವಾರಿ ಎ. ಪಾಪಾರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು, ಶಾಸಕ ಡಾ. ಶಿವರಾಜ ಪಾಟೀಲ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಇದ್ದರು.

ಬಹುಮಾನ ಬಾಚಿಕೊಂಡ ಕರ್ನೂಲ್‌ ಎತ್ತುಗಳು!

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಎರಡನೇ ದಿನ ಸೋಮವಾರ ನಡೆದ ಎತ್ತುಗಳಿಂದ ಎರಡು ಟನ್‌ ಕಲ್ಲಿನ ಭಾರ ಎಳೆಯುವ ಅಖಿಲ ಭಾರತೀಯ ಮಟ್ಟದ ಸ್ಪರ್ಧೆಯಲ್ಲಿ ಆಂಧ್ರಪ್ರದೇಶ ಕರ್ನೂಲ್‌ ಜಿಲ್ಲೆಯ ಎತ್ತುಗಳೇ ಎಲ್ಲ ಬಹುಮಾನಗಳನ್ನು ಬಾಚಿಕೊಂಡವು. ಒಟ್ಟು ಏಳು ಜೋಡಿ ಎತ್ತುಗಳು ಭಾಗಿಯಾಗಿದ್ದವು. ಭಾರ ಎಳೆಯಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.

ಕರ್ನೂಲ್‌ ಜಿಲ್ಲೆ ಪೆದ್ದಪ್ಪಲ್ಲಿ ಚಂದ್ರಕಲಾ ಗ್ರಾಮದ ಶ್ರವಣಕುಮಾರ್‌ ಅವರ ಎತ್ತುಗಳು 3,146 ಆಡಿ ದೂರ ಎಳೆದು ಪ್ರಥಮ ಸ್ಥಾನ ₹60 ಸಾವಿರ ನಗದು ಬಹುಮಾನ ಪಡೆದವು. ಕರ್ನೂಲ್‌ ಜಿಲ್ಲೆ ಪುಣ್ಯ ಮಂಡಲದ ಕೊತ್ತೂರು ಗ್ರಾಮದ ವೀರಂ ಸುಬ್ರಮಣ್ಯಶ್ವರ ರೆಡ್ಡಿ ಅವರ ಎತ್ತುಗಳು 3,105 ಅಡಿ ದೂರ ಎಳೆದು ಎರಡನೇ ಸ್ಥಾನ ₹45 ಸಾವಿರ ನಗದು ಬಹುಮಾನಕ್ಕೆ ಪಾತ್ರವಾದವು. ಕಡಪ ಜಿಲ್ಲೆಯ ಪೆದ್ದಟೂರು ಮಂಡಲದ ಕಾಮನೂರು ಗ್ರಾಮದ ಪೆದ್ದಿ ಶಿವಕಾಂತ ರೆಡ್ಡಿ ಅವರ ಎತ್ತುಗಳು 3,093 ಅಡಿ ದೂರ ಎಳೆದು ಮೂರನೇ ಸ್ಥಾನ ₹35 ಸಾವಿರ ನಗದು ಬಹುಮಾನ ಪಡೆದವು. ಪುಣ್ಯ ಮಂಡಲದ ಕೊತ್ತೂರು ಗ್ರಾಮದ ಬಿ.ಎಸ್‌.ಎಸ್‌. ರೆಡ್ಡಿ ಅವರ ಎತ್ತುಗಳು 3,054 ಅಡಿ ದೂರ ಎಳೆದು ನಾಲ್ಕನೇ ಸ್ಥಾನ ₹25 ಸಾವಿರ ನಗದು ಬಹುಮಾನಕ್ಕೆ ಪಾತ್ರವಾದವು. ವೈಎಸ್‌ಆರ್‌ ಜಿಲ್ಲೆಯ ರಾಜಿಪೇಟ ಮಂಡಲದ ಸುಂಕೇಶಲ ಗ್ರಾಮದ ಮಲೆ ಸುಶೇಂದ್ರರೆಡ್ಡಿ ಅವರ ಎತ್ತುಗಳು 2,502 ಅಡಿ ದೂರ ಎಳೆದು ಐದನೇ ಸ್ಥಾನ ₹20 ಸಾವಿರ ನಗದು ಬಹುಮಾನ ಪಡೆದವು.

ಕಾರ ಹುಣ್ಣಿಮೆ ದಿನದಂದು ನಡೆದ ಸ್ಪರ್ಧೆಗಳನ್ನು ನೋಡುವುದಕ್ಕೆ ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT