ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆವರು ಸುರಿಸುತ್ತಿದೆ ಬಿಸಿಲು: ನೆಮ್ಮದಿಯ ನಿದ್ರೆಯೂ ಇಲ್ಲದೆ ಹೊರಳಾಟ

Last Updated 26 ಮೇ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಬೇಸಿಗೆಕಾಲ ಮುಕ್ತಾಯವಾಗುವ ಅಂಚಿನಲ್ಲಿ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ನಿಂದ ಇನ್ನೂ ಅಧಿಕವಾಗುತ್ತಿದ್ದು, ಜಿಲ್ಲೆಯ ಜನರ ನೆಮ್ಮದಿಯ ನಿದ್ರೆಯನ್ನು ಕಸಿದುಕೊಂಡಿದೆ. ಕನಿಷ್ಠ ತಾಪಮಾನ 29 ಡಿಗ್ರಿ ಇರುವುದರಿಂದ ರಾತ್ರಿಯಲ್ಲೂ ಬೆವರು ಸುರಿಯುತ್ತಿದೆ!

ಬಯಲು ಪ್ರದೇಶಗಳಿಂದ ಸುತ್ತುವರೆದ ಗ್ರಾಮಗಳಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಜನರು ಮತ್ತು ಜಾನುವಾರು ಪ್ರತಿ ಘಳಿಗೆ ಬಾಯಾರಿಕೆಯಿಂದ ಬಳಲುವಂತಾಗಿದೆ. ರಾಯಚೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕುಗಳ ನಗರ, ಪಟ್ಟಣಗಳು ಹಾಗೂ ಗ್ರಾಮಗಳೆಲ್ಲವೂ ಬಹುತೇಕ ಕಲ್ಲುಬಂಡೆ ಗುಡ್ಡಗಳಿಗೆ ಹೊಂದಿಕೊಂಡಿವೆ. ಇದರಿಂದ ಬಿಸಿಲು ಇನ್ನೂ ಅಧಿಕವಾಗಿ ಬಾಧಿಸುತ್ತಿದೆ.

ಕಳೆದ ವರ್ಷ ಮೇ ತಿಂಗಳು ಗರಿಷ್ಠ 43.5 ತಾಪಮಾನ ದಾಖಲಾಗಿತ್ತು. ಈ ವರ್ಷ ಗರಿಷ್ಠ ಮಟ್ಟ 43 ಡಿಗ್ರಿವರೆಗೂ ತಲುಪಿದ್ದು, ಕಳೆದ ವರ್ಷಕ್ಕಿಂತಲೂ ಅಧಿಕವಾಗುವುದಿಲ್ಲ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಿಂದಿನ ಹತ್ತು ವರ್ಷಗಳ ತಾಪಮಾನ ಹೋಲಿಸಿದರೆ, 2010 ರಲ್ಲಿ ಗರಿಷ್ಠ ತಾಪಮಾನವು 43.8 ಕ್ಕೆ ತಲುಪಿರುವುದೆ ಅತಿಹೆಚ್ಚು. 1928 ರಲ್ಲಿ ಮೇ 23 ರಂದು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 45.6 ಡಿಗ್ರಿ ಏರಿಕೆಯಾಗಿದ್ದು ಸರ್ವಕಾಲಿಕ ದಾಖಲೆ.

ಕೊರೊನಾ ಬಿಸಿಲು: ಕೊರೊನಾ ಮಹಾರೋಗದ ವಿರುದ್ಧ ಹೋರಾಟ ನಡೆಸುತ್ತಾ ಬೇಸಿಗೆಕಾಲ ಕಳೆಯುತ್ತಿರುವುದು ಪ್ರಸ್ತುತ ಪೀಳಿಗೆಯ ಮೊದಲ ಮೊದಲ ಅನುಭವ. ಹಿಂದೆಂದೂ ಕಾಣದ, ಕೇಳಿರದ ರೋಗದ ಕಾಲಘಟ್ಟ ಇದು. ತಾಪಮಾನ ಏರಿಕೆಯಾಗಿ ಇಷ್ಟ ಇದ್ದರೂ ಜನರು ಐಸ್‌ಕ್ರೀಂ ಸವಿಯುತ್ತಿಲ್ಲ. ಪ್ರತಿ ಸಲ ತಂಪು ಪಾನೀಯ ಮಳಿಗೆಗಳ ಎದುರು ಜನರು ಜಮಾಯಿಸುತ್ತಿದ್ದ ಚಿತ್ರಣ ಈ ವರ್ಷ ಇಲ್ಲ.

‘ಪ್ರತಿವರ್ಷ ಮಾರ್ಚ್‌ನಿಂದ ಮೇ ಮುಗಿಯುವವರೆಗೂ ತಂಪು ಪಾನೀಯ ಮತ್ತು ಐಸ್‌ಕ್ರೀಂ ಸವಿಯುವುದಕ್ಕೆ ಜನರು ಮುಗಿಬೀಳುತ್ತಿದ್ದರು. ಈ ವರ್ಷ ಕೊರೊನಾ ರೋಗದಿಂದಾಗಿ ವ್ಯಾಪಾರವೇ ಇಲ್ಲ. ಲಾಕ್‌ಡೌನ್‌ ಸಡಿಲಿಕೆ ಆಗಿದ್ದರೂ, ಮೊದಲಿನಂತೆ ಜನರು ಬರುತ್ತಿಲ್ಲ. ಬೆರಳೆಣಿಕೆಯಷ್ಟು ಜನರು ಮಾತ್ರ ಖರೀದಿಸುತ್ತಿದ್ದಾರೆ. ಕೊರೊನಾ ರೋಗದ ಭಯದಿಂದ ಬೇಸಿಗೆ ಬಿಸಿಲನ್ನು ಎಂಜಾಯ್‌ ಮಾಡುತ್ತಿದ್ದಾರೆ’ ಎಂದು ಐಸ್‌ಕ್ರೀಂ ಪಾರ್ಲರ್‌ ವ್ಯಾಪಾರಿ ಮಹೇಶ್‌ ಹೇಳಿದರು.

‘ಫ್ಯಾನ್‌, ಎ.ಸಿ., ಕೂಲರ್‌ ಅನುಕೂಲ ಇಲ್ಲದ ಕೊಳೆಗೇರಿ ಜನರು ಬೇಸಿಗೆಪೂರ್ತಿ ನೆಮ್ಮದಿಯಿಂದ ನಿದ್ರಿಸುವುದಿಲ್ಲ. ಕೆಲವರು ಮದ್ಯಪಾನ ಮಾಡಿ ಮಲಗುತ್ತಾರೆ. ಹೊರಗಡೆ ಮಲಗಿದರೂ ತಂಪು ಗಾಳಿ ಇರುವುದಿಲ್ಲ, ಸೊಳ್ಳೆ ಕಾಟ. ಫ್ಯಾನ್‌ ಇದ್ದರೂ ಆಗಾಗ ವಿದ್ಯುತ್‌ ಸಂಪರ್ಕ ಕಡಿತ ಮಾಡುವುದರಿಂದ ಗಾಢನಿದ್ರೆ ಬರುವುದೇ ಇಲ್ಲ. ಈಗಂತೂ ಬಡವರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಎಲ್‌ಬಿಎಸ್‌ ನಗರದ ಉಬೇದ್‌ ಮೊಯಿನುದ್ದೀನ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT