ಮೂರು ದಿನಗಳ ಬಳಿಕ ಬಿಸಿಲು

ರಾಯಚೂರು: ಜಿಲ್ಲೆಯಲ್ಲಿ ಮೂರು ದಿನಗಳ ಬಳಿಕ ಶುಕ್ರವಾರ ಮಧ್ಯಾಹ್ನ ಸೂರ್ಯನು ಪ್ರಕಾಶಮಾನವಾಗಿ ಗೋಚರಿಸಿದ್ದರಿಂದ ಕೆಲಕಾಲ ಬಿಸಿಲು ಹರಡಿಕೊಂಡಿತು.
ಬಂಗಳಕೊಲ್ಲಿಯಲ್ಲಿ ಸುಳಿಗಾಳಿ ಬೀಸುತ್ತಿರುವುದರಿಂದ ಹಾಗೂ ಉತ್ತರ ಭಾರತದ ಹಿಮಾಲಯದಿಂದ ಶೀತಗಾಳಿ ಬೀಸುತ್ತಿರುವುದರಿಂದ ಜಿಲ್ಲೆಯಲ್ಲಿ ಬಿಸಿಲು ಇಲ್ಲದೆ ಮಬ್ಬು ಆವರಿಸಿಕೊಂಡಿತ್ತು. ಬುಧವಾರ ಬೆಳಿಗ್ಗೆಯಿಂದ ಎರಡು ದಿನ ಸುರಿದ ತುಂತುರು ಮಳೆಯು ರೈತರಲ್ಲಿ ಆತಂಕವನ್ನು ತುಂಬಿತ್ತು.
ಶುಕ್ರವಾರ ಮಳೆ ಸುರಿಯದಿದ್ದರೂ ಮೋಡ ಕವಿದ ಮಬ್ಬು ವಾತಾವರಣ ಮುಂದುವರಿದಿತ್ತು. ಮಧ್ಯಾಹ್ನದ ಬಳಿಕ ಬಿಸಿಲು ಕಾಣಿಸಿದ್ದರಿಂದ ಜನರು ಸ್ವಲ್ಪ ನಿರಾಳತೆ ಅನುಭವಿಸಿದರು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ, ಭತ್ತದ ಕೊಯ್ಲು ಜಿಲ್ಲೆಯಲ್ಲಿ ಭರದಿಂದ ಮುಂದುವರಿದಿತ್ತು. ಮೂರು ದಿನಗಳ ಹಿಂದೆ ದಿಢೀರ್ ಆವರಿಸಿದ ತಂಪಿನಿಂದಾಗಿ ಕೊಯ್ಲು ಮಾಡುವುದಕ್ಕೆ ಅಡಚಣೆ ಆಗಿದೆ.
ಮೆಣಸಿನಕಾಯಿ, ಭತ್ತ ಹಾಗೂ ಇತರೆ ಫಸಲು ಚೆನ್ನಾಗಿ ಒಣಗುವುದಕ್ಕೆ ಬಿಸಿಲು ಬೇಕೆಬೇಕು. ಕೊಯ್ಲು ತಡವಾದರೆ ನಷ್ಟವಾಗುವ ಆತಂಕದಲ್ಲಿ ರೈತರಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಶನಿವಾರದಿಂದ ವಾತಾವರಣ ಸಹಜ ಸ್ಥಿತಿಗೆ ಮರಳಲಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.