ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ | ಅಶುದ್ಧ ಕುಡಿಯುವ ನೀರು ಪೂರೈಕೆ

ಜಾನೇಕಲ್: ಕೆರೆ ಸ್ವಚ್ಛತೆ, ಭರ್ತಿಗೆ ಅಧಿಕಾರಿಗಳ ನಿರ್ಲಕ್ಷ್ಯ
Last Updated 18 ಏಪ್ರಿಲ್ 2020, 2:28 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಜಾನೇಕಲ್ ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ಸ್ವಚ್ಛಗೊಳಿಸದೆ ನೀರು ಹರಿಸಲಾಗಿದ್ದು ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಎಡದಂಡೆ ನಾಲೆಯ ಉಪ ಕಾಲುವೆಯಿಂದ ನೀರು ಹರಿಸಿ ಕೆರೆಯನ್ನು ಭರ್ತಿಗೊಳಿಸಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಕೆರೆ ನೀರು ಹರಿಸಲಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಲ್ಲ. ಕೆರೆಯ ನೀರು ಶುದ್ಧೀಕರಿಸುವ ಘಟಕ ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿದೆ.

ಗ್ರಾಮಸ್ಥರು ಕುಡಿಯಲು ಅಶುದ್ಧ ನೀರನ್ನು ಬಳಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಜಲ ನಿರ್ಮಲ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಈ ಕೆರೆಯಿಂದ ಗ್ರಾಮಕ್ಕೆ ಪೈಪ್‍ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕಾರಣ ಗ್ರಾಮಸ್ಥರು, ಮಹಿಳೆಯರು ನೀರಿಗಾಗಿ ಪ್ರತಿ ದಿನ 1ಕಿಮೀ ದೂರ ಕ್ರಮಿಸಬೇಕಾಗಿದೆ.

ಕೆರೆಯ ನೀರು ಅಶುದ್ಧವಾಗಿರುವುದರಿಂದ ಸಮೀಪದ ಅಮರಾವತಿ, ಗವಿಗಟ್ಟು ಗ್ರಾಮದ ಕೆರೆಗಳು, ಖಾಸಗಿ ಕುಡಿಯುವ ನೀರಿನ ಘಟಕಗಳಿಗೆ ಅಲೆದಾಡಬೇಕಾಗಿದೆ. ಗ್ರಾಮದಲ್ಲಿ ಅಂದಾಜು 2 ಸಾವಿರ ಜನಸಂಖ್ಯೆ ಇದ್ದು ಶುದ್ಧ ಕುಡಿಯುವ ನೀರು ಪೂರೈಕೆಗೆ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಗೃತ ಮಹಿಳಾ ಸಂಘಟನೆಯ ಸದಸ್ಯೆಯರು ಶುಕ್ರವಾರ ಗ್ರಾಮದ ಕೆರೆ ಹತ್ತಿರ ಕೆಲಹೊತ್ತು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆದಷ್ಟು ಬೇಗನೆ ಕೆರೆಯನ್ನು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರಿನಿಂದ ಭರ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT