ಗುರುವಾರ , ಜನವರಿ 21, 2021
30 °C
ಲಿಂಗಸುಗೂರು: ಸ್ವಚ್ಛ ಭಾರತ ಅಭಿಯಾನ ಯೋಜನೆ ಅನುಷ್ಠಾನ ವಿಫಲ

ಸರ್ಜಾಪುರ: ಬಯಲು ಬಹಿರ್ದೆಸೆ ಜೀವಂತ!

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ತಾಲ್ಲೂಕಿನಲ್ಲಿ ಸ್ವಚ್ಛ ಗ್ರಾಮ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣದ ಪ್ರಗತಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂಬ ‍ಘೋಷಣೆಗೆ ಅಪವಾದವಾಗಿದೆ. ಗ್ರಾಮ ಪ್ರವೇಶಿಸುವ ಸುತ್ತಮುತ್ತಲ ರಸ್ತೆಗಳು ಮಲಮೂತ್ರ, ತಿಪ್ಪೆಗುಂಡಿಗಳಿಂದ ದುರ್ನಾತ ಬೀರುತ್ತಿದೆ.

ತಾಲ್ಲೂಕು ಕೇಂದ್ರದಿಂದ 7 ಕಿ.ಮೀ ಅಂತರದಲ್ಲಿರುವ ಸರ್ಜಾಪುರ ಗ್ರಾಮ ಪಂಚಾಯಿತಿ ಜೊತೆಗೆ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಕೇಂದ್ರ ಸ್ಥಳವಾಗಿದೆ. ಸರ್ಕಾರದ ಯೋಜನೆ ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ತಲಪುತ್ತಿವೆ ಎಂಬುವುದಕ್ಕಿಂತ ಕಾಗದ ಪತ್ರಗಳ ಮೂಲಕ ಅನುಷ್ಠಾನ ಗೊಳ್ಳುತ್ತಿವೆ ಎಂಬುದಕ್ಕೆ ಈ ಗ್ರಾಮ ನಿದರ್ಶನವಾಗಿದೆ.

ಮೂರು ವರ್ಷಗಳ ಹಿಂದೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ವನ್ನಾಗಿ ಘೋಷಿಸಿಕೊಳ್ಳುವ ಉದ್ದೇಶ ದಿಂದ ಗ್ರಾಮದ ಪಶ್ಚಿಮ ದಿಕ್ಕಿನ ಹೊರವಲಯದಲ್ಲಿ ಫಲಾನುಭವಿಗಳ ಹೆಸರಲ್ಲಿ ಒಂದೆ ಸ್ಥಳದಲ್ಲಿ 33 ಶೌಚಾಲಯಗಳ ನಿರ್ಮಾಣ ಮಾಡಲಾ ಗಿದೆ. ಪಂಚಾಯಿತಿ ಆಡಳಿತ ಮಂಡಳಿ ನೀರು ನಿರ್ವಹಣೆ ಭರವಸೆ ಹುಸಿಯಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಒಂದೊಂದು ಕುಟುಂಬಕ್ಕೆ ಒಂದು ಶೌಚಾಲಯ ಎಂದು ಗುರುತಿಸಿ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಸ್ವಚ್ಛತೆ, ನೀರು, ಗಾಳಿ ಬೆಳಕು ಕೊರತೆಯಿಂದ ಬಳಕೆ ಮಾಡದ ಫಲಾನುಭವಿ ಕುಟುಂಬಸ್ಥರು ಗ್ರಾಮದ ಸುತ್ತಲಿನ ರಸ್ತೆಯನ್ನು ಶೌಚಾಲಯವಾಗಿ ಬಳಸುತ್ತಿರುವುದು ನಾಗರಿಕ ಸಮಾಜ ವನ್ನು ತಲೆತಗ್ಗಿಸುವಂತೆ ಮಾಡಿದೆ.

‘ಗ್ರಾಮದೆಲ್ಲಡೆ ಜೋಳ ಸಂಗ್ರಹಿಸುವ ಗುಂಡಿ (ಅಗೆವು) ಇದ್ದು ಶೌಚಾಲಯ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಅಧಿಕಾರಿ ಒತ್ತಡ ಮೇರೆಗೆ ಹೊರವಲಯದಲ್ಲಿ ಶೌಚಾಲಯ ನಿರ್ಮಿಸಿ ಮೂರು ವರ್ಷವಾದವು. ನೀರು, ವಿದ್ಯುತ್‍ ಸಂಪರ್ಕ ಕೊರತೆಯಿಂದ ಫಲಾನುಭವಿ ಕುಟುಂಬಸ್ಥರು ಬಳಕೆ ಮಾಡುತ್ತಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ನಿಜಗುಣಿ ಗುಂಟಿ ಆರೋಪಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುಂಡಪ್ಪ ಮಾತನಾಡಿ, ‘ತಾವು ಹೊಸದಾಗಿ ಅಧಿಕಾರ ಸ್ವೀಕಾರ ಮಾಡಿರುವೆ. ಈ ಹಿಂದಿನವರು 33 ಶೌಚಾಲಯ ಒಂದಡೆ ಯಾಕೆ ನಿರ್ಮಿಸಿದ್ದಾರೆ ಎಂಬುದು ತಿಳಿದಿಲ್ಲ. ಶೌಚಾಲಯದ ಕೊಳವೆಬಾವಿ ದುರಸ್ತಿಗೆ ಬಂದಿದೆ. ಕೂಡಲೆ ದುರಸ್ತಿಗೊಳಿಸಿ ನಿರಂತರ ನೀರು ಪೂರೈಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.