ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಗ್ರಾಮದತ್ತ ಮುಕ್ಕುಂದಾ ಗ್ರಾ.ಪಂ ಹೆಜ್ಜೆ

ಅಭಿವೃದ್ಧಿ ಕಾಮಗಾರಿಗಳಿಗೆ ವೇಗ; ಜಿಲ್ಲೆಯಲ್ಲಿ ಗಮನಸೆಳೆದ ಪಂಚಾಯಿತಿ
Last Updated 12 ನವೆಂಬರ್ 2019, 19:47 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಮುಕ್ಕುಂದಾ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದು ಕೊಂಡಿದ್ದು, ಜಿಲ್ಲೆಯಲ್ಲಿ ಗಮನಸೆಳೆದಿದೆ.

ಮುಕ್ಕುಂದಾ ಗ್ರಾಮದಲ್ಲಿ 900 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ತೊಡಲಾಗಿದೆ. ಹುಡಾ ಗ್ರಾಮದಲ್ಲಿ 480 ಮತ್ತು ಸಿಂಗಾಪುರದಲ್ಲಿ 430 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸ್ವಚ್ಛ ಭಾರತ ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕೆ ತರಲಾಗಿದೆ.

ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ರಸ್ತೆ, ಉದ್ಯೋಗ ಖಾತರಿ ಯೋಜನೆಯಡಿ 5000 ಚೀಲ ಸಂಗ್ರಹ ಸಾಮರ್ಥ್ಯದ ಗೋದಾಮು ಕಟ್ಟಿಸಲಾಗಿದೆ. ₹ 26 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಸುಸಜ್ಜಿತ ಚರಂಡಿಗಳನ್ನು ನಿರ್ಮಿಸಿ ಚರಂಡಿ ನೀರು ಸರಾಗವಾಗಿ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. 14ನೇ ಹಣಕಾಸು ಯೋಜನೆಯಡಿ ₹ 80 ಸಾವಿರದಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದೆ. ತಲಾ ₹ 10 ಲಕ್ಷ ವೆಚ್ಚದಲ್ಲಿ ಮೂರು ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಪಂಚಾಯಿತಿ ಕಾರ್ಯವನ್ನು ಗ್ರಾಮಸ್ಥರಾದ ಶಂಭನಗೌಡ ಕಿಲ್ಲೇದ್, ಮುದಿಯಪ್ಪ ನಂದಿಹಳ್ಳಿ ಶ್ಲಾಘಿಸಿದ್ದಾರೆ.

₹ 9 ಲಕ್ಷ ವೆಚ್ಚದಲ್ಲಿ ಯರಕಲ್‍ಘಾತ ಸೇತುವೆ ನಿರ್ಮಾಣ, ₹ 9.5 ಲಕ್ಷದಲ್ಲಿ ಸಿಂಗಾಪುರಕ್ಕೆ ಹೋಗುವ ಹಳೆರಸ್ತೆ ಮತ್ತು ₹ 4.5 ಲಕ್ಷದಲ್ಲಿ ಭದ್ರಂಮಾಗಿ ರಸ್ತೆ ನಿರ್ಮಿಸಲಾಗಿದೆ. ಗ್ರಾಮದಲ್ಲಿದ್ದ ತಿಪ್ಪೆಗುಂಡಿ ಮತ್ತು ಬಣವೆಗಳನ್ನು ತೆರವುಗೊಳಿಸಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ಡಬ್ಬ ಅಂಗಡಿಗಳನ್ನು ಇಟ್ಟುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಎರಡು ಶುದ್ದೀಕರಣ ಘಟಕ ಆರಂಭಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ₹ 5 ಲಕ್ಷದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ₹ 25 ಲಕ್ಷದಲ್ಲಿ ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಿಸಲಾಗಿದೆ.

ಪ್ರೌಢ ಶಾಲಾ ಒಳಾಂಗಣದಲ್ಲಿ ಹೊಂಗೆ, ಬೇವು, ತೆಂಗು, ಮಾವು, ಪೇರಲ, ಆಲದಮರ, ಚಿಕ್ಕೂ, ಆಕ್ಸಿಜನ್ ಗಿಡ ಸೇರಿದಂತೆ ಹೂವು ಮತ್ತು ತರಕಾರಿ ಗಿಡಗಳನ್ನು ಬೆಳೆಸಿ ಸುಂದರ ಉದ್ಯಾನ ನಿರ್ಮಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ. ಹುಡಾ, ಸಿಂಗಾಪುರ ಗ್ರಾಮದಲ್ಲಿಯೂ ಪ್ರಾಥಮಿಕ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿದ್ದಾರೆ. ಹುಡಾ ಗ್ರಾಮದಲ್ಲಿ ₹ 3 ಲಕ್ಷದಲ್ಲಿ ಅಂಗನವಾಡಿ ಕೇಂದ್ರ ಮತ್ತು ₹ 4 ಲಕ್ಷ ವೆಚ್ಚದಲ್ಲಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೂ ಕಾಂಪೌಂಡ್ ನಿರ್ಮಿಸಲಾಗಿದೆ ಎನ್ನುತ್ತಾರೆ ರಂಗನಗೌಡ, ಜಡಿಯಪ್ಪ ಭೋವಿ, ತಿಮ್ಮಣ್ಣ.

ಮೂರು ಗ್ರಾಮಗಳಲ್ಲಿಯೂ ಸ್ವಚ್ಛತೆಯ ಜತೆಗೆ ರಸ್ತೆ, ಚರಂಡಿ, ಸೇತುವೆ, ಕಾಂಪೌಂಡ್, ಶುದ್ಧ ಕುಡಿಯುವ ನೀರು, ಹೊಲಗಳಿಗೆ ರಸ್ತೆ ಸೇರಿದಂತೆ ಮತ್ತಿತರರ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಮೂಲಕ ಮುಕ್ಕುಂದಾ ಗ್ರಾಮ ಪಂಚಾಯಿತಿಯು ತಾಲ್ಲೂಕಿನ ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿ ರೂಪುಗೊಂಡಿದೆ.

ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅ.2ರಂದು ಗುಜರಾತಿನ ಸಬರಮತಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛಭಾರತ ಕಾರ್ಯಕ್ರಮದಲ್ಲಿ ಮುಕ್ಕುಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕುಂತಲಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT