ಬುಧವಾರ, ಡಿಸೆಂಬರ್ 11, 2019
27 °C
ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ

ಸಮಸ್ಮಾತ್ಮಕ ಗ್ರಾಮಕ್ಕೆ ಟ್ಯಾಂಕರ್‌ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ಜಿಲ್ಲೆಯ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಮನವರಿಕೆಯಾದ ಎರಡು ದಿನಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಯಾ ತಾಲ್ಲೂಕು ತಹಶೀಲ್ದಾರ್‌ ಅವರ ಅನುಮತಿ ಪಡೆದು ಟ್ಯಾಂಕರ್‌ ನೀರು ಸರಬರಾಜು ಮಾಡಬೇಕು. ಅನುಮತಿಗಾಗಿ ಜಿಲ್ಲಾಧಿಕಾರಿಯನ್ನು ಕೇಳಬೇಕಾಗಿಲ್ಲ. ತಹಶೀಲ್ದಾರುಗಳಿಗೆ ಅನುಮತಿ ನೀಡುವ ಅಧಿಕಾರ ಮತ್ತು ಅನುದಾನವನ್ನು ಜಿಲ್ಲಾಧಿಕಾರಿಯು ಕೊಟ್ಟು ಕೆಲಸ ಮಾಡಿಸುತ್ತಾರೆ ಎಂದರು.

ಟ್ಯಾಂಕರ್‌ ನೀರು ಪೂರೈಸುವುದನ್ನು ಶಾಶ್ವತ ಪರಿಹಾರ ಮಾಡಿಕೊಳ್ಳಬಾರದು. ಆದಷ್ಟು ಶೀಘ್ರ ಖಾಸಗಿ ಕೊಳವೆ ಬಾವಿ ಗುರುತಿಸಿ ಬಾಡಿಗೆ ಪಡೆದುಕೊಳ್ಳಬೇಕು. ಖಾಸಗಿ ಕೊಳವೆ ಬಾವಿಗೆ ₨ 5 ಸಾವಿರದಿಂದ ₨10 ಸಾವಿರವರೆಗೂ ಬಾಡಿಗೆ ಕೊಡಲು ಅವಕಾಶವಿದೆ. ಖಾಸಗಿ ಕೊಳವೆಬಾವಿಯಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಬಾರದು. ಖಾಸಗಿ ಕೊಳವೆಬಾವಿಯಿಂದ ಮುಖ್ಯ ಪೈಪ್‌ಲೈನ್‌ ಗ್ರಾಮ ಪಂಚಾಯಿತಿಯಿಂದಲೇ ಸಂಪರ್ಕ ಮಾಡಿಕೊಳ್ಳಬೇಕು. ತಪ್ಪದೇ 15 ದಿನಗಳಿಗೊಮ್ಮೆ ಬಿಲ್‌ ಒಪ್ಪಿಸಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಬಿಲ್‌ ಕೊಟ್ಟ ಎರಡೇ ದಿನಗಳಲ್ಲಿ ಹಣ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದರು.

14ನೇ ಹಣಕಾಸು ಯೋಜನೆ: ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 14ನೇ ಹಣಕಾಸು ಯೋಜನೆಯಲ್ಲಿರುವ ಅನುದಾನದಲ್ಲಿ ಶೇ 30 ರಷ್ಟನ್ನು ಮೀಸಲಿಟ್ಟುಕೊಳ್ಳಬೇಕು. ಗ್ರಾಮ ಪಂಚಾಯಿತಿಗೆ ಬರುವ ಅನುದಾನವನ್ನು ನೀರು ಒದಗಿಸಲು ಬಳಸುವ ಬದ್ಧತೆ ತೋರಿಸಬೇಕು ಎಂದರು.

ವಿಕೋಪ ನಿರ್ವಹಣಾ ನಿಧಿ (ಡಿಎಂಎಫ್‌) ಅನುದಾನದಲ್ಲೂ ಕೆಲವು ಭಾಗ ನೀರಿಗಾಗಿ ಬಳಸಿಕೊಳ್ಳಬೇಕು. ಬರಗಾಲ ಘೋಷಣೆಯಾದ ಪ್ರದೇಶದಲ್ಲಿಯೇ ಕುಡಿಯುವ ನೀರಿನ ಯೋಜನೆ ಮಾಡಿಕೊಂಡು ಅನುದಾನ ವೆಚ್ಚ ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಮಸ್ಯೆ ಇರುವ ಗ್ರಾಮಗಳನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ಸೇರ್ಪಡೆ ಮಾಡಿಕೊಳ್ಳಬೇಕು. ಇದಕ್ಕಾಗಿ ₨117 ಕೋಟಿ ಅನುದಾನ ಜಿಲ್ಲೆಗೆ ಬಂದಿರುವುದನ್ನು ಸಂಪೂರ್ಣ ವೆಚ್ಚ ಮಾಡಬೇಕು ಎಂದರು.

ಹಣ ಉಳಿತಾಯಕ್ಕೆ ಸೂಚನೆ: ಕೊಳವೆಬಾವಿಯಲ್ಲಿ ನೀರಿಲ್ಲದೆ ಸ್ಥಗಿತವಾದ ಕಡೆಗಳಿಂದ ವಿದ್ಯುತ್‌ ಕಂಬಗಳನ್ನು, ಪಂಪ್‌ಸೆಟ್‌, ಕೊಳವೆಗಳನ್ನು ಅಗತ್ಯ ಇರುವ ಕಡೆಗೆ ಸ್ಥಳಾಂತರ ಮಾಡಿಕೊಳ್ಳಬೇಕು. ಇದರಿಂದ ಸರ್ಕಾರದ ಕೋಟ್ಯಂತರ ಹಣ ಉಳಿತಾಯ ಮಾಡಬಹುದು. ಈ ರೀತಿಯ ಕ್ರಮ ಅನುಸರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು ಕೋಟಿ ಹಣ ಉಳಿತಾಯ ಮಾಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ತಾಲ್ಲೂಕಿಗೆ ₨50 ಲಕ್ಷ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪ್ರಥಮ ಹಂತವಾಗಿ ಪ್ರತಿ ತಾಲ್ಲೂಕಿಗೆ ₨50 ಲಕ್ಷ ಮಂಜೂರಾತಿ ನೀಡಲಾಗಿದೆ. ₨25 ಲಕ್ಷ ಬಿಡುಗಡೆಯಾಗಿದೆ. ಅನುದಾನದ ಸಂಪೂರ್ಣ ವೆಚ್ಚಕ್ಕೆ ಕ್ರಿಯಾಯೋಜನೆ ಮಾಡಿಕೊಳ್ಳಬೇಕು. ಡಿಸೆಂಬರ್‌ ಅಂತ್ಯದೊಳಗೆ ಎನ್‌ಆರ್‌ಡಬ್ಲುಪಿ ಕಾಮಗಾಗಳಿಗೆಲ್ಲ ಟೆಂಡರ್‌ ಕರೆಯಬೇಕು ಎಂದು ತಿಳಿಸಿದರು.

ವೈಯಕ್ತಿಕ ‘ಖಾತರಿ’ ಯೋಜನೆ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯಡಿ ಸಾಮೂಹಿಕ ಕೆಲಸಗಳು ಸಾಕಷ್ಟಾಗಿವೆ. 60 ಲಕ್ಷ ಮಾನವ ದಿನಗಳ ಸೃಜನೆಯಾಗಿರುವುದನ್ನು ಒಂದು ಕೋಟಿಗೆ ತಲುಪಿಸಬೇಕು. ಆದರೆ, ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ, ದನದ ಕೊಟ್ಟಿಗೆಗಳ ನಿರ್ಮಾಣ, ಶಾಲಾ ಆವರಣ ಗೋಡೆಗಳ ನಿರ್ಮಾಣದಂತಹ ವೈಯಕ್ತಿಕ ಕೆಲಸಗಳನ್ನು ಮಾಡಿಸಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಅಧಿಕಾರಿಗಳು ತುರ್ತು ಗಮನಹರಿಸಿ ವೈಯಕ್ತಿಕ ಕೆಲಸ ಮಾಡಿಸಬೇಕು. ರೈತರು ಅಧಿಕಾರಿಗಳನ್ನು ಹುಡುಕಿಕೊಂಡು ಬರುವತನಕ ಕಾಯಬಾರದು. ರೈತರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ತಿಳಿಸಿದರು.

ಸಂಸದ ಬಿ.ವಿ. ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಚಿವ ವೆಂಕಟರಾವ್‌ ನಾಡಗೌಡ, ಜಿಲ್ಲಾಧಿಕಾರಿ ಬಿ.ಶರತ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್‌ ಅತುಲ್‌ ಇದ್ದರು.

25 ಗ್ರಾಮಗಳಲ್ಲಿ ಖಾಸಗಿ ಕೊಳವೆ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಲಾಗಿದೆ. 25 ಗ್ರಾಮಗಳಲ್ಲಿ 29 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಅವರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ನೀಡಿದರು.

ಪ್ರತಿ ತಾಲ್ಲೂಕಿನಲ್ಲಿ ಕಂಟ್ರೊಲ್‌ ರೂಂ ಸ್ಥಾಪಿಸಲಾಗಿದ್ದು, ಜನರ ಆಹವಾಲು ಪಡೆಯಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ವಹಿಸಲಾಗುತ್ತಿದೆ ಎಂದರು.

* ಸಲಕ್ಯಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ತುಂಬಾ ಎಚ್ಚರಿಕೆಯಿಂದ ಪರಿಶೀಲಿಸಬೇಕು. ನೀರು ಬರುತ್ತಿದೆ ಎಂದು ಅನುದಾನ ಬಿಡುಗಡೆ ಮಾಡಬೇಡಿ.
-ಬಸವರಾಜ ಪಾಟೀಲ ಇಟಗಿ
ವಿಧಾನ ಪರಿಷತ್‌ ಸದಸ್ಯ

* ರಾಯಚೂರು ನಗರ ಕ್ಷೇತ್ರದ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಶಾಶ್ವತ ಪರಿಹಾರಕ್ಕೆ ಅನುದಾನ ಒದಗಿಸಬೇಕು. ಟ್ಯಾಂಕರ್ ಮೂಲಕ ಅಧಿಕಾರಿಗಳು ನೀರು ಪೂರೈಸಬೇಕು.
-ಡಾ. ಶಿವರಾಜ ಪಾಟೀಲ, ಶಾಸಕ

* ಕುರ್ಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದು 12 ವರ್ಷಗಳಾಗಿವೆ. ಗ್ರಾಮೀಣ ಕ್ಷೇತ್ರದ 54 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ನೀರು ಕೊಡಬೇಕು.
-ಬಸನಗೌಡ ದದ್ದಲ, ಶಾಸಕ

* ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ವಿಫಲವಾಗುತ್ತಿವೆ. ಅಧಿಕಾರಿಗಳು ಸರಿಯಾಗಿ ಅಂದಾಜು ಪಟ್ಟಿಯನ್ನು ಮೊದಲೇ ಮಾಡಿಕೊಂಡಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ.
-ಪ್ರತಾಪಗೌಡ ಪಾಟೀಲ, ಶಾಸಕ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು