ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ರಂದು ಮ್ಯಾರಾಥಾನ್‌, ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ

ತಾರಾನಾಥ ಶಿಕ್ಷಣ ಸಂಸ್ಥೆಯ ಹಮ್‌ದರ್ದ್‌ ಶಾಲೆಯ ಶತಮಾನೋತ್ಸವ
Last Updated 3 ಜೂನ್ 2019, 13:55 IST
ಅಕ್ಷರ ಗಾತ್ರ

ರಾಯಚೂರು: ಈ ಭಾಗದಲ್ಲಿ ಶೈಕ್ಷಣಿಕ ಇತಿಹಾಸದ ಹೆಗ್ಗುರುತಾದ ತಾರಾನಾಥ ಶಿಕ್ಷಣ ಸಂಸ್ಥೆ ಮತ್ತು ಹಮ್‌ದರ್ದ್‌ ಶಾಲೆಯು ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಈ ನಿಮಿತ್ತ ಜೂನ್‌ 12 ರಂದು ನೂತನ ಶಾಲಾ ಕಟ್ಟಡ ಲೋಕಾರ್ಪಣೆ, ಪುರುಷ–ಮಹಿಳೆಯರಿಗಾಗಿ ಪ್ರತ್ಯೇಕ ಮ್ಯಾರಾಥಾನ್‌ ಹಾಗೂ ಸಾಂಸ್ಕೃತಿಕ, ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್‌ ಸುಖಾಣಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12 ರಂದು ಬೆಳಿಗ್ಗೆ 6 ಗಂಟೆಗೆ ಎಲ್‌ವಿಡಿ ಕಾಲೇಜಿನಿಂದ ಹಮ್‌ದರ್ದ್‌ ಶಾಲೆವರೆಗೂ ಪುರುಷರ ಮ್ಯಾರಾಥಾನ್‌ ನಡೆಯಲಿದೆ. ಬಿ.ಆರ್‌.ಬಿ. ಕಾಲೇಜು, ಆರ್‌ಟಿಓ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಹಾಗೂ ಟಿಪ್ಪು ಸುಲ್ತಾನ್‌ ರಸ್ತೆ ಮಾರ್ಗವಾಗಿ ಮ್ಯಾರಾಥಾನ್‌ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಸಿಇಒ ನಲಿನ್‌ ಅತುಲ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಅವರು ಮ್ಯಾರಾಥಾನ್‌ ಉದ್ಘಾಟಿಸುವರು. ಇದು ಮುಕ್ತ ಮ್ಯಾರಾಥಾನ್‌ ಆಗಿದ್ದು, ರಾಜ್ಯದಾದ್ಯಂತ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಪ್ರಥಮ ₹25 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ಇದೇ ವೇಳೆ ಮಹಿಳಾ ಮ್ಯಾರಾಥಾನ್‌ ಜೂನ್‌ 12 ರಂದು ಬೆಳಿಗ್ಗೆ 6.30 ಕ್ಕೆ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಿಂದ ಆರಂಭಿಸಲಾಗುವುದು. ರಾಯಚೂರು ಉಪವಿಭಾಗಾಧಿಕಾರಿ ಶಿಲ್ಪಾ ಶರ್ಮಾ, ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್‌ ಲೀಡರ್‌ ಜಿ.ಅಶ್ವಿನಿ ಪಾಟೀಲ ಅವರು ಮ್ಯಾರಾಥಾನ್‌ ಉದ್ಘಾಟಿಸುವರು. ಪ್ರಥಮ ₹15 ಸಾವಿರ, ದ್ವಿತೀಯ ₹10 ಸಾವಿರ ಹಾಗೂ ತೃತೀಯ ₹7.5 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಮ್ಯಾರಾಥಾನ್‌ದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ಹಮ್‌ದರ್ದ್‌ ಶಾಲಾ ಆವರಣದಲ್ಲಿ ಬೆಳಿಗ್ಗೆ 10.30 ಕ್ಕೆ ಮುಖ್ಯ ಕಾರ್ಯಕ್ರಮ ನಡೆಯುವುದು. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರು ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡುವರು. ವಿಜಯಪುರ ಶ್ರೀ ರಾಮಕೃಷ್ಣ–ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಸಾನಿಧ್ಯ ವಹಿಸುವರು.

ಸಂಜೆ 4.30 ಕ್ಕೆ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಬಿ.ಶರತ್‌ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್‌ ಸುಖಾಣಿ ಅಧ್ಯಕ್ಷತೆ ವಹಿಸುವರು. ಡಿಡಿಪಿಐ ಬಿ.ಕೆ. ನಂದನೂರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರೆಲ್ಲರೂ ಭಾಗಿಯಾಗುವರು. ಸಾಂಸ್ಕೃತಿಕ ಸಂಜೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯೋತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ, ಉಪಾಧ್ಯಕ್ಷ ಆರ್‌.ತಿಮ್ಮಯ್ಯ, ಖಜಾಂಚಿ ಪುರುಷೋತ್ತಮದಾಸ ಇನ್ನಾಣಿ ಹಾಗೂ ಜಂಟಿ ಕಾರ್ಯದರ್ಶಿ ಅಂಬಾಪತಿ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT