ಸ್ಥಳೀಯ ಗುಣಮಟ್ಟದ ಹಾಲಿನಲ್ಲಿ ರುಚಿಯಾದ ಚಹಾ

7

ಸ್ಥಳೀಯ ಗುಣಮಟ್ಟದ ಹಾಲಿನಲ್ಲಿ ರುಚಿಯಾದ ಚಹಾ

Published:
Updated:
Prajavani

ನಮ್ಮೂರ ಆಹಾರ... 

ಸಿಂಧನೂರು ನಗರದ ಡೆಕ್ಕನ್ ಹೋಟೆಲ್‌ನಲ್ಲಿ ಇಕ್ಬಾಲ್‌ ಅವರು ಮಾಡಿಕೊಡುವ ಚಹಾ ಸವಿಯುವುದಕ್ಕೆ ಬೆಳಿಗ್ಗೆಯಿಂದಲೇ ಜನರು ಬಾಯಿ ಚಪ್ಪರಿಸಿಕೊಂಡು ಬರುತ್ತಾರೆ.

ಬೆಳಿಗ್ಗೆ 6 ಗಂಟೆಗೆ ದಿನಚರಿ ಆರಂಭಿಸುವ ಮೊದಲು ಚಹಾ ಕುಡಿದು ಹೋಗುವ ಕಾಯಂ ಗ್ರಾಹಕರು ಸಾಕಷ್ಟಿದ್ದಾರೆ. ಆನಂತರ ಒಬ್ಬರ ಹಿಂದೆ ಒಬ್ಬರಂತೆ ಜನರು ಬರತೊಡಗುತ್ತಾರೆ. ಇದು ರಾತ್ರಿ 8 ಗಂಟೆವರೆಗೂ ಮುಂದುವರಿಯುತ್ತದೆ. ಗೆಳೆಯರೊಂದಿಗೆ, ಸಂಬಂಧಿಗಳೊಂದಿಗೆ ಈ ಹೋಟೆಲ್‌ಗೆ ಬಂದು ಚಹಾ ಸೇವಿಸುತ್ತಾರೆ. ಚಹಾ ಕುಡಿಯುತ್ತಲೇ ಇಕ್ಬಾಲ್‌ ಅವರ ಕೈ ರುಚಿಯನ್ನು ಹೊಗಳುವುದು ಸಾಮಾನ್ಯ.

ಏಳನೇ ತರಗತಿ ಓದಿರುವ ಇಕ್ಬಾಲ್‌ ಅವರು ಚಹಾ ಅಂಗಡಿ ನಡೆಸುವುದನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. 40 ವರ್ಷಗಳ ಹಿಂದೆ ಇಕ್ಬಾಲ್‌ ಅವರ ತಂದೆ ಆರಂಭಿಸಿ ಈ ವೃತ್ತಿಯನ್ನು ತುಂಬಾ ಶ್ರದ್ಧೆಯಿಂದ ಇವರೂ ಮುಂದುವರಿಸಿದ್ದಾರೆ. 20 ವರ್ಷಗಳಿಂದ ಹೋಟೆಲ್‌ ಇಕ್ಬಾಲ್‌ ಅವರ ಸುಪರ್ದಿಯಲ್ಲಿದೆ.

‘ಮುಚ್ಚಳ್ಳಕ್ಯಾಂಪಿನಿಂದ ಪ್ರತಿದಿನ ಎಮ್ಮೆಯ ಗಟ್ಟಿ ಹಾಲನ್ನು ಹಾಕಿಸಿಕೊಂಡು ತರುತ್ತೇವೆ. ಅದಕ್ಕೆ ನೀರು ಬೆರಸದೆ ಚಹ ಮಾಡುತ್ತೇನೆ. ಇದು ರಚಿಕರವಾಗಿರುತ್ತದೆ. ಆದ್ದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎನ್ನುವುದು ಇಕ್ಬಾಲ್‌ ಅವರ ಮಾತು.

ಹೋಟೆಲ್ ಆರಂಭಿಸುವ ಮುನ್ನವೇ ಚಹಕ್ಕಾಗಿ ಜನರು ಕಾದು ಕುಳಿತಿರುತ್ತಾರೆ. ನಗರದ ವಿವಿಧ ವಾರ್ಡಿನ ಕೌನ್ಸಲರ್‌ಗಳು, ಕೆಲ ಗಣ್ಯ ವ್ಯಕ್ತಿಗಳು ಸಹ ಹೋಟೆಲ್‌ಗೆ ಬಂದು ಚಹ ಕುಡಿದು ಹೋಗುತ್ತಾರೆ. ಕೆಲವರು ಪಾರ್ಸಲ್ ತೆಗೆದುಕೊಂಡು ಹೋಗುವುದು ಉಂಟು.

ಒಂದು ದಿನಕ್ಕೆ ಚಹಾ ಮಾಡಿಕೊಡಲು ಸರಾಸರಿ 170 ಲೀಟರ್‌ ಮೀಟರ್ ಖರ್ಚಾಗುತ್ತಿದೆ. ಇಕ್ಬಾಲ್‌ ಅವರ ಜೊತೆಗೆ ಸಹಾಯಕರಾಗಿ ಆರು ಜನರು ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಸಂಬಳ ಕೊಟ್ಟು, ಎಲ್ಲ ಖರ್ಚು ತೆಗೆದು ದಿನಕ್ಕೆ ₹1500 ಆದಾಯ ಉಳಿಸಿಕೊಳ್ಳುತ್ತಾರೆ.

ಒಂದು ಚಹಾಗೆ 50 ಪೈಸೆ ದರ ಇದ್ದ ಕಾಲದಿಂದ ಸದ್ಯ ₹5 ದರದಲ್ಲಿ ಚಹಾ ಕೊಡುತ್ತಾರೆ. ಜನರು ಕುಡಿಯುಲು ಶುದ್ಧ ನೀರನ್ನೆ ಒದಗಿಸುತ್ತಾರೆ. ಚಹಾ ಕುಡಿಯಲು ಬಂದವರೆಲ್ಲ ಪ್ರೀತಿಯಿಂದ ಮಾಮೂ ಎಂದು ಕರೆಯುತ್ತಾರೆ.

‘ಈ ಚಹಾದ ಅಂಗಡಿಯಿಂದ ನನ್ನ ಕುಟುಂಬದ ಜೀವನ ನಡೆಸುವುದರ ಜೊತೆಗೆ ಅಣ್ಣನ 5 ಜನ ಮಕ್ಕಳ ಮದುವೆ ಮಾಡಿದ್ದೇನೆ. ನನಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗಳು ಉಮೇರಾ ತಬಸುಮ್, ಕಿರಿಯ ಮಗಳು ಕನೀಸ್ ಫಾತಿಮಾ ಇಬ್ಬರನ್ನು ಪದವಿವರೆಗೆ ಓದಿಸಿದ್ದೇನೆ. ದೊಡ್ಡ ಮಗಳನ್ನು ಈಗಾಗಲೇ ಮದುವೆ ಮಾಡಿ ಕೊಡಲಾಗಿದೆ.  ಇದೇ ಹೋಟೆಲ್‌ನಿಂದ ಒಂದು ಪ್ಲಾಟ್‌ನ್ನು ಖರೀದಿಸಿದ್ದೇನೆ. ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ಸುಖವಾಗಿ ಜೀವನ ಮಾಡುತ್ತಿದ್ದೇವೆ’ ಎಂದು ತಮ್ಮ ವೃತ್ತಿಯಿಂದ ಪಡೆದ ಆದಾಯದ ಗಣಿತವನ್ನು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !