ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಯಾವ ಗ್ರಾಮಗಳಲ್ಲಿದೆ: ಸಚಿವ ವೆಂಕಟರಾವ ನಾಡಗೌಡ ಪ್ರಶ್ನೆ

ಬರ ಪರಿಹಾರ ಕಾಮಗಾರಿಗಳ ಪರಿಶೀಲನಾ ಸಭೆ
Last Updated 16 ಮೇ 2019, 13:42 IST
ಅಕ್ಷರ ಗಾತ್ರ

ರಾಯಚೂರು: ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವ ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನೀರಿನ ಸಮಸ್ಯೆಯಿಲ್ಲ ಎಂದರೆ, ಯಾರ ಮಾತನ್ನು ನಂಬಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಅಧಿಕಾರಿಗಳನ್ನು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಯಚೂರು ಗ್ರಾಮೀಣ ಹಾಗೂ ಮಾನ್ವಿ ಶಾಸಕರು ತಮ್ಮ ಕ್ಷೇತ್ರದ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ವರದಿ ನೀಡಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಗಳು ಸಮಸ್ಯೆಯಿಲ್ಲ ಎಂದು ಹೇಳುತ್ತಿರುವುದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಏನೇ ತೊಂದರೆ ಇದ್ದರೂ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಹೊಣೆ ಮಾಡಿ, ಅಮಾನತು ಮಾಡಬೇಕಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ಪಡೆದ ಸಚಿವ, ಕುಡಿಯುವ ನೀರಿನ ಕಾಮಗಾರಿಗಳು ಒಂದಕ್ಕೊಂದು ಸಂಬಂಧವಿಲ್ಲವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಿಂಗಳುಗಳು ಕಳೆದರೂ ಫಂಗ್ಷನ್‌ ಮಾಡಿಲ್ಲ. ಈ ಕಾರ್ಯಕ್ರಮ ಬಹಳಷ್ಟು ಹೊಲಗೇರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀತಿ ಆಯೋಗದ ಕಾರ್ಯಕ್ರಮದ ಜಲ ಸಂವರ್ಧನೆಗೆ ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದಾಗ ಅಸಮರ್ಪಕವಾದ ಮಾಹಿತಿ ನೀಡಿದ ಕೆಆರ್‌ಐಡಿಎಲ್‌ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಜವಾಬ್ದಾರಿ ಇಲ್ಲವೇ, ಈ ರೀತಿ ಮಾಡಿದರೆ ಸಭೆಯಿಂದ ಹೊರಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಿಂದ ಬೆಳೆ ವಿಮೆಯ ಮಾಹಿತಿ ಪಡೆದ ಸಚಿವರು, ಬೆಳೆ ವಿಮೆ ಮಾಡಿಸಿಕೊಂಡ ರೈತರಿಗೆ ವರ್ಷಗಳಾದರೂ ಪರಿಹಾರ ದೊರೆಯದಿದ್ದರೆ ವಿಮೆ ಮಾಡಿಸಿಕೊಳ್ಳಲು ರೈತರು ಹೇಗೆ ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದರು.

2018–19 ಸಾಲಿನ ಮುಂಗಾರು ಹಂಗಾಮಿನಲ್ಲಿ 86,229 ರೈತರಲ್ಲಿ 5,492 ರೈತರಿಗೆ ಮಾತ್ರ ಪರಿಹಾರ ಬಂದರೆ ಉಳಿದ ರೈತರ ಪರಿಸ್ಥಿತಿಯೇನು ಎಂದು ಅಧಿಕಾರಿಗಳನ್ನು ಕೇಳಿದರು. ತಾಂತ್ರಿಕ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಿಕೊಂಡು ರೈತರಿಗೆ ಆಯಾ ವರ್ಷದಲ್ಲೇ ವಿಮೆ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ನಿರ್ದೇಶಿಸಿದರು.

ಕುಡಿಯುವ ನೀರು ಒದಗಿಸಲು ಅನುದಾನದ ಸಮಸ್ಯೆಯಿಲ್ಲ. ಆದ್ದರಿಂದ ತಾಲ್ಲೂಕು ಪಂಚಾಯಿತಿ ಇಒ ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳು ಮೊಬೈಲ್‌ ಸ್ವಿಚ್‌ ಆಫ್‌ ಮಾಡದೇ, ರಜೆಯೂ ತೆಗೆದುಕೊಳ್ಳದೇ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಲಿನ್ ಅತುಲ್, ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ, ಉಪ ವಿಭಾಗಾಧಿಕಾರಿ ಶಿಲ್ಪಾ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT