ಶನಿವಾರ, ಜನವರಿ 18, 2020
26 °C
ಮಾನ್ವಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಯೋಜನೆ

ಟಿಇಟಿ ತರಬೇತಿಗೆ ಅಭ್ಯರ್ಥಿಗಳ ಕೊರತೆ

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ಸರ್ಕಾರಿ ಶಿಕ್ಷಕ ಹುದ್ದೆಗೆ ಅರ್ಹತಾ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನೆರವಾಗಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರಸಕ್ತ ವರ್ಷ ಮೊದಲ ಬಾರಿಗೆ ಆಯೋಜಿಸಿರುವ ಉಚಿತ ತರಬೇತಿಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸರ್ಕಾರಿ ಶಿಕ್ಷಕರ ನೇಮಕಾತಿಯಲ್ಲಿ ಈ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ಮಾಡುವ ಮಹತ್ವಾಕಾಂಕ್ಷೆಯಿಂದ ಆರಂಭಿಸಿರುವ ಈ ತರಬೇತಿಗೆ ಅಭ್ಯರ್ಥಿಗಳ ನಿರಾಸಕ್ತಿ ಹಾಗೂ ಹಾಜರಾತಿ ಕೊರತೆ ಕಂಡು ಬಂದಿದೆ.

ಮಾನ್ವಿಯ ಶಾರದಾ ವಿದ್ಯಾನಿಕೇತನ ಬಿ.ಇಡಿ ಕಾಲೇಜಿನ ಉಚಿತ ತರಬೇತಿ ಕೇಂದ್ರದಲ್ಲಿ  ಹೆಸರು ನೋಂದಾಯಿಸಿದ 102 ಅಭ್ಯರ್ಥಿಗಳ ಪೈಕಿ ಕೇವಲ 8ಜನ ಅಭ್ಯರ್ಥಿಗಳು ತರಬೇತಿಗೆ ಹಾಜರಾಗಿದ್ದರು.

ಡಿ.2ರಿಂದ ಜ.22ರವರೆಗೆ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ 33 ಬಿ.ಇಡಿ ಕಾಲೇಜುಗಳಲ್ಲಿ ಈ ಉಚಿತ ತರಬೇತಿ ಆರಂಭಿಸಲಾಗಿದೆ. ಬಿ.ಇಡಿ ಮತ್ತು ಡಿ.ಇಡಿ ಪದವೀಧರರು, ಬಿ.ಇಡಿ 4ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ತರಬೇತಿ ಪಡೆಯಲು ಅರ್ಹತೆ ಹೊಂದಿದ್ದಾರೆ. ಪ್ರತಿ ಬಿ.ಇಡಿ ಕಾಲೇಜಿನ 3 ಪ್ರಾಧ್ಯಾಪಕರನ್ನು ತರಬೇತಿಯ ಸಂಪನ್ಮೂಲ
ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಿ ಕಲಬುರ್ಗಿಯಲ್ಲಿ 2 ದಿನಗಳ ವಿಶೇಷ ತರಬೇತಿ ನೀಡಲಾಗಿದೆ. ಬಿ.ಇಡಿ ಕಾಲೇಜಿನ ಪ್ರಾಂಶುಪಾಲರನ್ನು ತರಬೇತಿ ಕೇಂದ್ರದ ನೋಡಲ್‌ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಟಿಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಪ್ರತಿ ದಿನ ಸಂಜೆ 4.30ರಿಂದ 7.30ರವರೆಗೆ ಬೋಧಿಸಲಾಗುತ್ತಿದೆ. ತರಬೇತಿಗೆ ನಿಗದಿ ಮಾಡಿರುವ ಸಮಯ ಹಾಗೂ ವಿಷಯಗಳ ಆಯ್ಕೆ ಅಭ್ಯರ್ಥಿಗಳ ಗೈರು ಹಾಜರಿಗೆ ಕಾರಣ ಎಂದು ತಿಳಿದು ಬಂದಿದೆ.

ಸಂಜೆ ವೇಳೆ ತರಬೇತಿಗೆ ಹಾಜರಾಗಲು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಬಸ್‌ ಸಮಸ್ಯೆ ಕಾರಣವಾಗಿದೆ. ಸಂಜೆ 7.30ರವರೆಗೆ ತರಬೇತಿ ನಡೆಯುವ ಕಾರಣ ಗ್ರಾಮೀಣ ಭಾಗದ ಆಸಕ್ತ ಮಹಿಳಾ ಅಭ್ಯರ್ಥಿಗಳು ಸುರಕ್ಷತಾ ದೃಷ್ಟಿಯಿಂದ ತರಬೇತಿಗೆ ಬರಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.

ಕೇವಲ ವಿಜ್ಞಾನ ಹಾಗೂ ಇಂಗ್ಲಿಷ್‌ ಶಿಕ್ಷಕ ಹುದ್ದೆಗಳ ನೇಮಕಾತಿಗೆ ನೆರವಾಗುವ ವಿಷಯಗಳನ್ನು ಬೋಧಿಸಲಾಗುತ್ತಿದೆ. ಶೈಕ್ಷಣಿಕ ಮನೋವಿಜ್ಞಾನ, ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳ ಬಗ್ಗೆಯೂ  ತರಬೇತಿ ನೀಡಬೇಕು ಎಂದು  ಪದವೀಧರರು ಒತ್ತಾಯಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಟಿಇಟಿಗೆ ಉಚಿತ ತರಬೇತಿ ಆರಂಭಿಸಿರುವ ಕುರಿತು ಅನೇಕ ಅಭ್ಯರ್ಥಿಗಳಿಗೆ ಮಾಹಿತಿ ಇಲ್ಲ. ಈ ಕುರಿತು ಸೂಕ್ತ ಪ್ರಚಾರ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಸ್ಥಳೀಯರ ದೂರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು