ಪ್ರವಾಹ: ಹಾಳಾದ ಸೇತುವೆ, ಜನರ ಪರದಾಟ

ಮಸ್ಕಿ: ಮಳೆಯಿಂದಾಗಿ ಹಳ್ಳಕ್ಕೆ ಬಂದ ಪ್ರವಾಹದಿಂದ ಮಸ್ಕಿಯಿಂದ ಹಿರೇಕಡಬೂರು ಸೇರಿದಂತೆ ವಿವಿಧ ಕ್ಯಾಂಪ್‌ಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋಗಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಈ ಮಾರ್ಗವಾಗಿ ಸಂಚರಿಸಲು ಪರದಾಡುತ್ತಿದ್ದಾರೆ.
ಪಟ್ಟಣದ ಹೊರ ಭಾಗದಲ್ಲಿ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆ ಸೇತುವೆಯ ಕೆಳ ಭಾಗದಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಹಿರೇಕಡಬೂರು ಸೇರಿದಂತೆ ವಿವಿಧ ಕ್ಯಾಂಪ್‌ಗಳಿಂದ ಪಟ್ಟಣಕ್ಕೆ ಸಂಪರ್ಕಿಸಲು ಮೂರು ವರ್ಷಗಳ ಹಿಂದೆ ಪಿಎಂಜಿಎಸ್‌ವೈ ಇಲಾಖೆಯಿಂದ ಈ ಸೇತುವೆಯನ್ನು ನಿರ್ಮಿಸಲಾಗಿತ್ತು.
ಹಳ್ಳಕ್ಕೆ ಸೇತುವೆ ನಿರ್ಮಿಸುತ್ತಿರುವಾಗಲೇ ಸೇತುವೆ ನಿರ್ಮಾಣ ಹಾಗೂ ಗುಣಮಟ್ಟದ ಬಗ್ಗೆ ಹಲವಾರು ಆರೋಪಗಳಿದ್ದವು. ಜಿಲ್ಲೆಯಲ್ಲಿಯೇ ದೊಡ್ಡ ಹಳ್ಳ ಎಂಬ ಹೆಸರು ಹೊಂದಿದ್ದ ಮಸ್ಕಿ ಹಳ್ಳಕ್ಕೆ ಕಿರಿದಾದ ಸೇತುವೆ ನಿರ್ಮಿಸಿ ಅದಕ್ಕೆ ಸಣ್ಣ ಸಣ್ಣ ಗಾತ್ರದ ಪೈಪ್‌ಗಳನ್ನು ಅಳವಡಿಸಿದ್ದರಿಂದ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರಿಂದ ಸಂಪರ್ಕ ಸೇತುವೆ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರು.
ಹಳ್ಳದ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋಗಿದ್ದರಿಂದ ಈ ಮಾರ್ಗವಾಗಿ ಪಟ್ಟಣಕ್ಕೆ ಬರುವ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕೊಚ್ಚಿಹೋದ ಸೇತುವೆಯ ಕಲ್ಲು ಮುಳ್ಳುಗಳಲ್ಲಿಯೇ ಸೇತುವೆ ದಾಟುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.