ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘350ನೇ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಗಾಗಿ ವರ್ಷವಿಡೀ ಕಾರ್ಯಕ್ರಮ’

ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವ ಉದ್ಘಾಟನೆ
Last Updated 21 ಆಗಸ್ಟ್ 2021, 15:21 IST
ಅಕ್ಷರ ಗಾತ್ರ

ರಾಯಚೂರು: ‘350ನೇ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ನಿಮಿತ್ತ ದೇಶದಾದ್ಯಂತ ಇರುವ ಎಲ್ಲ ಮಠಗಳಲ್ಲಿಯೂ ವರ್ಷದುದ್ದಕ್ಕೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ ನಿಮಿತ್ತ ಸಪ್ತರಾತ್ರೋತ್ಸವ ಕಾರ್ಯಕ್ರಮಗಳನ್ನು ಮಠದ ಮುಂಭಾಗ ಧ್ವಜಾರೋಹಣ ನೆರವೇರಿಸುವ ಮೂಲಕ ಶನಿವಾರ ಉದ್ಘಾಟಿಸಿ ಮಾತನಾಡಿದರು.

‘ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ವೈದ್ಯಕೀಯವಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುವುದು. ಕೊರೊನಾ ಉಪದ್ರವ ಇರುವುದರಿಂದ ಮಂತ್ರಾಲಯದಲ್ಲಿ ಈಗ ಅದ್ಧೂರಿ ಕಾರ್ಯಕ್ರಮ ರೂಪಿಸುವುದಕ್ಕೆ ಸಾಧ್ಯವಾಗಿಲ್ಲ. ಭಕ್ತರೆಲ್ಲರೂ ಸಹಕರಿಸಿ ಆರಾಧನೆಯಲ್ಲಿ ಪಾಲ್ಗೊಂಡು ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕು’ ಎಂದು ತಿಳಿಸಿದರು.

‘ರಾಯರ ಆರಾಧನಾ ಮಹೋತ್ಸವ ಆರಂಭಿಸುವ ಪೂರ್ವ ಮಂಚಾಲಮ್ಮದೇವಿ ಹಾಗೂ ಹರಿಗುರುಗಳೆಲ್ಲರಿಗೂ ಪ್ರಾರ್ಥನೆ ಸಲ್ಲಿಸಲಾಗಿದೆ. ಧ್ವಜಾರೋಹಣ ನೆರವೇರಿಸಲಾಗಿದೆ. ಶನಿವಾರದಿಂದ ಏಳು ದಿನಗಳವರೆಗೂ ಉತ್ಸವ ನಡೆಯಲಿದ್ದು, ಎಲ್ಲರೂ ಕೋವಿಡ್‌ ನಿಯಮಗಳನ್ನು ಪಾಲಿಸುವುದರೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು’ ಎಂದರು.

ಹರಿದಾಸ ದರ್ಶಿನಿ ಮ್ಯುಜಿಯಂ: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿ ಮಠದ ಪೂರ್ವದ್ವಾರದ ಹೊರಭಾಗದಲ್ಲಿ ‘ಹರಿದಾಸ ದರ್ಶಿನಿ ಮ್ಯೂಜಿಯಂ’ ನಿರ್ಮಾಣ ಮಾಡಿದ್ದು, ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶನಿವಾರ ಲೋಕಾರ್ಪಣೆ ಮಾಡಿದರು.

ಆನಂತರ ಮಾತನಾಡಿದ ಅವರು, ‘ಮ್ಯೂಜಿಯಂನಲ್ಲಿ ಕಾಣುವ ವಸ್ತುಸಂಗ್ರಹ ಮತ್ತು ಸಾಹಿತ್ಯವನ್ನು ಅಪ್ಪಣಾಚಾರ್ಯರು ಬಹಳ ಶ್ರದ್ಧೆಯಿಂದ, ಜಾಗರೂಕತೆಯಿಂದ ಒಟ್ಟುಗೂಡಿಸಿದ್ದಾರೆ. ಈ ಸಂದರ್ಭದಲ್ಲಿ ತುಂಬ ಹೃದಯದಿಂದ ಅಭಿನಂದಿಸುತ್ತೇನೆ. ಅವರ ಕುಟುಂಬದ ಎಲ್ಲ ಸದಸ್ಯರು ಇದಕ್ಕೆ ಸಹಕರಿಸಿದ್ದಾರೆ. ಇಡೀ ಕುಟುಂಬವು ರಾಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ತಂತ್ರಜ್ಞಾನ ಬಳಸಿಕೊಂಡು ಅದ್ಭುತ ರೂಪ ನೀಡಿದ್ದಾರೆ. ಹರಿದಾಸ ಪ್ರಾಜೆಕ್ಟ್‌ನಲ್ಲಿ ಅನೇಕರು ಶ್ರಮಿಸುತ್ತಿದ್ದಾರೆ’ ಎಂದರು.

‘ಸನಾತನ ಹಿಂದು ಧರ್ಮದ ತತ್ವಗಳನ್ನು ಮ್ಯೂಜಿಯಂನಲ್ಲಿ ತಿಳಿಸಿಕೊಡಲಾಗಿದೆ. ಎಲ್ಲ ಆಸ್ತಿಕರಿಗೆ ಹರಿದಾಸ ಸಾಹಿತ್ಯ ತಿಳಿಯಪಡಿಸುವುದು ಇದರ ಉದ್ದೇಶ. ತೆಲುಗು, ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಸಾಹಿತ್ಯವಿದೆ. ಚಿತ್ರಗಳು, ವಸ್ತುಗಳ ಮೂಲಕ ಹಿಂದು ಸಂಸ್ಕೃತಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.

‘ಮುಂಬರುವ 400ನೇ ಶ್ರೀರಾಘವೇಂದ್ರ ಸ್ವಾಮಿಗಳ ಪೀಠಾರೋಹಣ ಸಂದರ್ಭದಲ್ಲಿ ಇನ್ನೊಂದು ಭವ್ಯ ಮ್ಯೂಜಿಯಂ ಕೂಡಾ ಅಪ್ಪಣಾಚಾರ್ಯರ ಮೂಲಕವೇ ಬರಲಿದೆ. ಬಹುಕೋಟಿ ಮೌಲ್ಯದ ‘ಅಕ್ಷರಧಾಮ’ವನ್ನು ವರ್ಧಂತಿ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT