ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಮರಳು ಗಣಿಗಾರಿಕೆ ನಿಷೇಧಿಸಲು ಸೂಚನೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಮರಳು ಸಮಿತಿ ಸಭೆ
Last Updated 19 ನವೆಂಬರ್ 2019, 14:23 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕು ಮಟ್ಟದಲ್ಲಿ ಅನಧಿಕೃತ ಮರಳು ಗಣಿಗಾರಿಕೆ ನಿಯಂತ್ರಿಸಲು ರಚಿಸಿರುವ ತಾಲ್ಲೂಕು ಮಟ್ಟದ ಮರಳು ಜಾಗೃತಿ ದಳ ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಮಟ್ಟದ ಮರಳು ಜಾಗೃತಿ ದಳಕ್ಕೆ ಸಹಾಯಕ ಆಯುಕ್ತರು ಅಧ್ಯಕ್ಷರಾಗಿದ್ದು, ಪೊಲೀಸ್, ಕಂದಾಯ, ಪಂಚಾಯಾತ್ ರಾಜ್ ಎಂಜಿನಿಯರಿಂಗ್, ಪ್ರಾದೇಶಿಕ ಸಾರಿಗೆ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದವರು ಕೂಡಲೇ ಮರಳು ಜಾಗೃತ ದಳದ ಸಭೆ ನಡೆಸಬೇಕು. ಜಾಗೃತಿ ದಳವನ್ನು ಬಲಪಡಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ತಾಲ್ಲೂಕು ಮಟ್ಟದ ವ್ಯಾಪ್ತಿಯ ದೂರುಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮರಳು ಸಾಗಾಣಿಗೆ ತಪಾಸಣೆ ನಡೆಸಲು ಜಿಲ್ಲೆಯಲ್ಲಿ 14 ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಅವುಗಳು ಸದಾಕಾಲ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು. ದಿನಕ್ಕೆ ಮೂರು ಪಾಳೆಯಂತೆ ಎಂಟು ತಾಸು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಸೂಕ್ತವಾದ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು. ಈ ಮಾರ್ಗದಲ್ಲಿ ಹಾದುಹೋಗುವ ವಾಹನಗಳ ಸಂಖ್ಯೆ ಹಾಗೂ ವಾಹನಗಳ ಚಲನೆ ಸಂಪೂರ್ಣ ಸಿಸಿಟಿವಿಯಲ್ಲಿ ಸೆರೆಯಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, 14 ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿಗಳ ಚಲನವಲನಗಳನ್ನು ಕಡ್ಡಾಯವಾಗಿ ವೀಕ್ಷಣೆ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಸಿಸಿಟಿವಿಯ ಫೂಟೆಜ್‌ಗಳನ್ನು ಪೊಲೀಸರಿಗೆ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಪ್ರತಿ ತಿಂಗಳು ಕಡ್ಡಾಯವಾಗಿ ಒಂದು ಸಭೆ ಮಾಡಿ ಮರಳು ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು. ಚೆಕ್‌ಪೋಸ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ವಿಶ್ವನಾಥ ಅವರಿಗೆ ತಿಳಿಸಿದರು.

ಸಂಚಾರ ಷರತ್ತುಗಳನ್ನು ಉಲ್ಲಂಘಿಸಿ ಮರಳು ಸಾಗಾಣಿಕೆ ಮಾಡುವ ವಾಹನಗಳ ಪರವಾನಗಿಯನ್ನೇ ರದ್ದು ಮಾಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಆನಂದ್ ಅವರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಸರ್ಕಾರಿ ಕಾಮಗಾರಿಗಳಿಗೆ ಬೇಡಿಕೆಗಳಿಗೆ ಅನುಸಾರವಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮೂಲಕ ಸರ್ಕಾರಿ ಬ್ಲಾಕ್ ಮರಳನ್ನು ಪೂರೈಸುವಂತೆ ಈ ಸಂದರ್ಭದಲ್ಲಿ ತಿಳಿಸಿದರು.

ರಾಯಚೂರು ವಿಭಾಗೀಯ ಸಹಾಯಕ ಆಯುಕ್ತ ಸಂತೋಷ, ಲಿಂಗಸೂಗೂರು ಸಹಾಯಕ ಆಯುಕ್ತರು, ರಾಯಚೂರು ತಹಶೀಲ್ದಾರ್ ಡಾ. ಹಂಪಣ್ಣ ಸೇರಿದಂತೆ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT