ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲುಗಳಿಲ್ಲದ ಸಾಮೂಹಿಕ ಮಹಿಳಾ ಶೌಚಾಲಯ!

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಮನವಿ
Last Updated 2 ಜುಲೈ 2018, 16:49 IST
ಅಕ್ಷರ ಗಾತ್ರ

ರಾಯಚೂರು: ರಸ್ತೆ ಬದಿ ಬಹಿರ್ದೆಸೆ ಕುಳಿತ ಮಹಿಳೆಯರು ಜನರನ್ನು ಕಂಡು ಎದ್ದು ನಿಲ್ಲುವುದು; ಜನರು ಕಣ್ಮರೆಯಾದ ಮೇಲೆ ಕುಳಿತುಕೊಳ್ಳುವ ಬೈಠಕ್‌ ಸಂಕಷ್ಟವು ಕೆಲವು ಗ್ರಾಮಗಳಲ್ಲಿದೆ. ಆದರೆ, ರಾಯಚೂರು ನಗರದ ಮಧ್ಯಭಾಗ ಬೇರೂನ್‌ಕಿಲ್ಲಾ ಬಡಾವಣೆಯಲ್ಲೂ ಮಹಿಳೆಯರು ಈ ಸಂಕಷ್ಟ ಎದುರಿಸುತ್ತಿದ್ದಾರೆ!

ನಗರಸಭೆಯಿಂದ ನಿರ್ಮಿಸಿರುವ ಸಾಮೂಹಿಕ ಮಹಿಳಾ ಶೌಚಾಲಯಗಳಿಗೆ ಬಾಗಿಲುಗಳಿಲ್ಲ. ನಸುಕಿನಲ್ಲಿ ಅಥವಾ ರಾತ್ರಿ ಕತ್ತಲಲ್ಲಿ ಶೌಚಾಲಯ ಬಳಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಶೌಚಾಲಯ ಸುತ್ತಲಿನ ಪರಿಸರವೂ ದುರ್ನಾತ ಬೀರುತ್ತಿದೆ. ಹಂದಿ, ಬೀದಿನಾಯಿಗಳ ಉಪಟಳ ಹೇಳತೀರದು. ಬಾಗಿಲುಗಳಿಲ್ಲದ ಶೌಚಾಲಯಗಳಿಗೆ ನಾಯಿ ಮತ್ತು ಹಂದಿಗಳು ನುಗ್ಗುತ್ತವೆ. ಉಸಿರು ಬಿಗಿಹಿಡಿದು ಶೌಚಾಲಯಕ್ಕೆ ಹೋಗುವ ಮಹಿಳೆಯರು ಮರ್ಯಾದೆ ಕಾಪಾಡಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಹಂದಿ, ನಾಯಿಗಳನ್ನು ಓಡಿಸಲು ಶೌಚಾಲಯಕ್ಕೆ ಹೋಗುವಾಗ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಹೋಗಬೇಕು!

ಶೌಚಾಲಯಕ್ಕೆ ಸಮೀಪದಲ್ಲಿರುವ ಎತ್ತರದ ಕಟ್ಟಡಗಳ ಮೇಲಿನಿಂದ ಮಹಿಳೆಯರು ಹೋಗಿ ಬರುವುದು ಗೋಚರಿಸುತ್ತದೆ. ಸಾಮೂಹಿಕ ಶೌಚಾಲಯ ಸಮುಚ್ಚಯದ ಮೇಲೆ ಮೇಲ್ಛಾವಣಿಯಿಲ್ಲ. ಗ್ರಾಮೀಣ ಭಾಗದಲ್ಲಿ ಕನಿಷ್ಠಪಕ್ಷ ಬಯಲಾದರೂ ಇರುತ್ತದೆ; ದೂರದಿಂದಲೆ ಜನರು ಹೋಗಿ, ಬರುವುದನ್ನು ನೋಡಲು ಸಾಧ್ಯವಾಗುತ್ತದೆ.
ಬೇರೂನ್‌ಕಿಲ್ಲಾ ತುಂಬಾ ಇಕ್ಕಟ್ಟಿನ ಬಡಾವಣೆ. ಇಂತಹ ಇಕ್ಕಟ್ಟಿನಲ್ಲಿ ನಿರ್ಮಿಸಿರುವ ಸಾಮೂಹಿಕ ಶೌಚಾಲಯಕ್ಕೆ ಸಮರ್ಪಕ ಮೂಲ ಸೌಕರ್ಯಗಳನ್ನು ಮಾಡಬೇಕಾಗಿದೆ.

15 ವರ್ಷಗಳ ಹಿಂದೆ ನಿರ್ಮಿಸಿರುವ ಈ ಸಾಮೂಹಿಕ ಶೌಚಾಲಯದ ನಿರ್ವಹಣೆಯು ಸಮರ್ಪಕವಾಗಿ ಆಗುತ್ತಿಲ್ಲ. ಶೌಚಾಲಯಕ್ಕೆ ನೀರು ಹಾಕಿ ಸ್ವಚ್ಚಗೊಳಿಸುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ. ಆದರೆ, ಶೌಚಾಲಯಗಳ ಬಾಗಿಲುಗಳು ಮುರಿದು ಎರಡು ವರ್ಷಗಳಾದರೂ ಹಾಕಿಸಿಲ್ಲ. ದಾರಿಯಲ್ಲಿ ಹೋಗುವವರಿಗೆ ಶೌಚಾಲಯಗಳ ಬಾಗಿಲುಗಳು ಕಾಣದಂತೆ ಅಡ್ಡಲಾಗಿ ಒಂದು ಗೋಡೆ ನಿರ್ಮಿಸಿದರೂ ಸಮಸ್ಯೆ ಇರುತ್ತಿರಲಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಹೇಳುತ್ತಿದ್ದೇವೆ. ಆದರೂ ಯಾವುದೇ ಕ್ರಮವಾಗಿಲ್ಲ. ಬಡವರ ಸಮಸ್ಯೆಗೆ ಬೇಗನೆ ಸ್ಪಂದನೆ ಸಿಗುವುದಿಲ್ಲ ಎಂದು ಬಡಾವಣೆ ವಯೋವೃದ್ಧೆ ಮಲ್ಲಮ್ಮ ಅವರು “ಪ್ರಜಾವಾಣಿ” ಎದುರು ಅಳಲು ತೋಡಿಕೊಂಡರು.

ಹಳ್ಳಿಗಳಲ್ಲಿ ಇಂಥ ಸ್ಥಿತಿ ಇರುವುದಿಲ್ಲ. ಆದರೆ ರಾಯಚೂರು ನಗರದಲ್ಲಿ ಮಹಿಳೆಯರು ಶೌಚಾಲಯಕ್ಕೆ ಹೋಗುವುದು ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಸ್ವಂತ ಶೌಚಾಲಯ ಮಾಡಿಕೊಳ್ಳುವಷ್ಟು ಜಾಗವಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರದವರು ಸಾಮೂಹಿಕ ಶೌಚಾಲಯ ಮಾಡಿಕೊಟ್ಟಿದ್ದಾರೆ. ಶೌಚಾಲಯಗಳಿಗೆ ಬಾಗಿಲು ಇಲ್ಲದಿರುವುದರಿಂದ ದಾರಿಯಲ್ಲಿ ಹೋಗಿ ಬರುವ ಜನರನ್ನು ನೋಡಿಕೊಂಡು ಶೌಚಾಲಯಕ್ಕೆ ಹೋಗಿ ಬರುವ ಅನಿವಾರ್ಯತೆ ಇದೆ ಎಂದು ಸುಲೋಚನಾ ಅವರು ಸಮಸ್ಯೆಯನ್ನು ಬಿಡಿಸಿಟ್ಟರು.

ಬೇರೂನ್‌ಕಿಲ್ಲಾ ಬಡಾವಣೆಯಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ನಾಲ್ಕು ಕಡೆಗಳಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ರುವ ಶೌಚಾಲಯಗಳಿಗೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ವಿವಿಧ ಸಂಘ–ಸಂಸ್ಥೆಗಳ ನೇತೃತ್ವದಲ್ಲಿ ಬಡಾವಣೆಯ ಜನರು ಮೇಲಿಂದ ಮೇಲಿಂದ ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ.

ಬೇರೂನ್‌ಕಿಲ್ಲಾದ ಮಹಿಳಾ ಶೌಚಾಲಯ ಸಮಸ್ಯೆ ನನಗೆ ಈಗ ಗೊತ್ತಾಗಿದೆ. ಸಮಸ್ಯೆ ಪರಿಹರಿಸಲು ತುರ್ತಾಗಿ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ.
ರಮೇಶ ನಾಯಕ, ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT