ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಜಾಲಿಪೊದೆಗಳ ಮಧ್ಯೆ ಶೌಚಾಲಯ

ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಮಲ್ಲಾಪುರ ಮಹಿಳೆಯರ ಅಸಮಾಧಾನ
Last Updated 27 ಜೂನ್ 2021, 19:30 IST
ಅಕ್ಷರ ಗಾತ್ರ

ಸಿಂಧನೂರು: ಜಾಲಿಪೊದೆಗಳ ಮಧ್ಯೆ ಬಗ್ಗಿಕೊಂಡು, ಮುಳ್ಳುಕಂಟಿಗಳನ್ನು ತುಳಿದುಕೊಂಡು ಅತ್ಯಂತ ತ್ರಾಸಪಟ್ಟುಕೊಂಡು ಮಹಿಳೆಯರು ನಿರುಪಯುಕ್ತಗೊಂಡು ಗಬ್ಬುನಾರುವ ಶೌಚಾಲಯದಲ್ಲಿಯೇ ಬಹಿರ್ದೆಸೆಗೆ ಹೋಗುವ ಸ್ಥಿತಿ ನಗರ ಪ್ರದೇಶದಿಂದ 4 ಕಿ.ಮೀ ಅಂತರದಲ್ಲಿರುವ ಮಲ್ಲಾಪುರ ಗ್ರಾಮದಲ್ಲಿದೆ.

ತಾಲ್ಲೂಕಿನ ಬೂತಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಲ್ಲಾಪುರ ಗ್ರಾಮದಲ್ಲಿ ಪಂಚಾಯಿತಿಯಿಂದ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಅನೇಕರು ಜಾಗದ ಸಮಸ್ಯೆಯಿಂದ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಂಡಿಲ್ಲ. ಹೀಗಾಗಿ ಮಹಿಳೆಯರು ಹಳ್ಳದ ಹತ್ತಿರ ನಿರ್ವಹಣೆ ಇಲ್ಲದೆ ಹದಗೆಟ್ಟಿರುವ ಶೌಚಾಲಯವನ್ನೇ ಬಳಸುತ್ತಿದ್ದಾರೆ.

ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಮಹಿಳೆಯರೇ ತಂಬಿಗೆಯಲ್ಲಿ ನೀರು ತರಬೇಕಾಗಿದೆ. ದುರ್ವಾಸನೆ ತಾಳದೆ ಮೂಗು ಮುಚ್ಚಿಕೊಂಡೇ ಕೂರಬೇಕಾದ ಸ್ಥಿತಿಯಿದೆ. ಶೌಚಾಲಯದ ಸುತ್ತಲೂ ಜಾಲಿಗಿಡಗಳ ಮುಳ್ಳುಕಂಟಿಗಳೇ ಆವರಿಸಿಕೊಂಡಿದೆ.

ಹಳ್ಳದ ಬಳಿಯ ಕೊಳವೆಬಾವಿ ಮೂಲಕ ಟ್ಯಾಂಕ್‍ಗೆ ನೀರು ತುಂಬಿಸಿ, ನಂತರ ಗ್ರಾಮಸ್ಥರಿಗೆ ಬಳಕೆ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಕೆರೆ ಇಲ್ಲ. ಕುಡಿಯುವ ನೀರು ಬೇಕಾದರೆ ಖಾಸಗಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ತೆರಳಿ ಹಣ ಕೊಟ್ಟು 20 ಲೀಟರ್ ಕ್ಯಾನ್ ಮತ್ತು ಕೊಡಗಳಲ್ಲಿ ತುಂಬಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ಅನೇಕ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಾಗ್ಯೂ ಸ್ಪಂದಿಸಿಲ್ಲ ಎಂದು ಗ್ರಾಮದ ಮಹಿಳೆಯರಾದ ಶರಣಮ್ಮ, ಮಲ್ಲಮ್ಮ, ರೇಣುಕಾ, ಪಾರ್ವತಿ, ಲಕ್ಷ್ಮಿ ಆಪಾದಿಸಿದ್ದಾರೆ.

‘ಹಸಿಕಸ, ಒಣಕಸ ಬೇರ್ಪಡಿಸಿ ಸಂಗ್ರಹಣೆಗಾಗಿ ಪಂಚಾಯಿತಿಯಿಂದ ಗ್ರಾಮದ ಪ್ರತಿ ಮನೆ-ಮನೆಗೂ ಡಬ್ಬಿಗಳನ್ನು ವಿತರಣೆ ಮಾಡಿದ್ದಾರೆ. ಆದರೆ ಕಸ ವಿಲೇವಾರಿ ವಾಹನ ಮನೆ-ಮನೆಗೆ ಬಂದು ಕಸವನ್ನು ತೆಗೆದುಕೊಂದು ಹೋಗುತ್ತಿಲ್ಲ. ಪಂಚಾಯಿತಿ ಮುಂದೆಯೇ ವಾಹನ ನಿಂತಿರುತ್ತದೆ.

ಹೀಗಾಗಿ ಜನರು ಕಸವನ್ನು ಚರಂಡಿಗೆ ಹಾಕುತ್ತಿದ್ದಾರೆ. ಇದರಿಂದ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಸ್ಮಶಾನದ ಬಳಿ ನಿರ್ಮಿಸಿರುವ ದನಗಳಿಗೆ ನೀರು ಕುಡಿಸುವ ತೊಟ್ಟಿ ನಿರುಪಯುಕ್ತವಾಗಿದೆ’ ಎಂದು ಕರ್ನಾಟಕ ವಿಶ್ವ ನಿರ್ಮಾಣ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ದುಗ್ಗಪ್ಪ ಮಲ್ಲಾಪುರ ದೂರಿದ್ದಾರೆ.

ಮಲ್ಲಾಪುರ ಗ್ರಾಮದಲ್ಲಿ ಶೌಚಾಲಯ, ಶುದ್ದ ಕುಡಿಯುವ ನೀರು, ಕಸ ವಿಲೇವಾರಿ ಹೀಗೆ ಹಲವು ಸಮಸ್ಯೆಗಳಿಂದ ಮಹಿಳೆಯರು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ. ಕೂಡಲೇ ಶೌಚಾಲಯ ದುರಸ್ತಿಗೊಳಿಸಿ, ನೀರಿನ ವ್ಯವಸ್ಥೆ ಕಲ್ಪಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

**
ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಪಂಚಾಯಿತಿ ಕಡೆಯಿಂದ ಮನೆ-ಮನೆಗೆ ಹೋಗಿ ಜಾಗೃತಿ ಮೂಡಿಸಿ, ಮನವಿ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಂಡಿಲ್ಲ. ಸಾಮೂಹಿಕ ಶೌಚಾಲಯ ನಿರ್ಮಿಸಿ, ನಿರ್ವಹಣೆ ಮಾಡುವ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈಗಿರುವ ಶೌಚಾಲಯದ ಪರಿಸ್ಥಿತಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು.
–ಲಿಂಗಪ್ಪ, ಪಿಡಿಒ ಬೂತಲದಿನ್ನಿ ಗ್ರಾ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT