ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹21 ಲಕ್ಷ ವೆಚ್ಚದ ಕಾಮಗಾರಿ ಹಿಂದೆ ದುರುದ್ದೇಶವಿಲ್ಲ

ನಗರಸಭೆ ಅಧ್ಯಕ್ಷ ಅನಿಲ್‌ ಕುಮಾರ್ ಸ್ಪಷ್ಟನೆ
Last Updated 8 ಮಾರ್ಚ್ 2018, 10:30 IST
ಅಕ್ಷರ ಗಾತ್ರ

ಹಾಸನ: ಹೇಮಾವತಿ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಸಂಪರ್ಕಕ್ಕೆ ಅಳವಡಿಸಿರುವ ₹ 21 ಲಕ್ಷ ವೆಚ್ಚದ ಪೈಪ್‍ಲೈನ್ ಕಾಮಗಾರಿಯ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್‌ ಸ್ಪಷ್ಟಪಡಿಸಿದರು.

‘ನಗರಸಭೆ ಬಿಜೆಪಿ ಸದಸ್ಯ ಸಾರ್ವಜನಿಕರ ದಾರಿ ತಪ್ಪಿಸಲು ಹಣ ದುಂದು ವೆಚ್ಚದ ಆರೋಪ ಮಾಡಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅನುಮತಿ ದೊರೆತ ಬಳಿಕವೇ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ಹಳೆಯ ಪೈಪ್‌ಗಳು ನಿಷ್ಕ್ರಿಯವಾಗಿದ್ದರಿಂದ ನಿತ್ಯ 3 ಎಂಎಲ್‍ಡಿ ನೀರು ಸೋರಿಕೆಯಾಗುತ್ತಿತ್ತು. ನಗರದಲ್ಲಿ 22 ಟ್ಯಾಂಕ್‍ಗಳಿದ್ದು, ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದ್ದರಿಂದ ಟ್ಯಾಂಕರ್ ಭರ್ತಿಯಾಗಲು ಅಧಿಕ ಸಮಯ ವ್ಯಯವಾಗುತ್ತಿತ್ತು. ಎಲ್ಲ ಟ್ಯಾಂಕ್‍ಗಳ ಭರ್ತಿಗೆ ಈ ಮೊದಲು 60 ಗಂಟೆ ಸಮಯ ಬೇಕಾಗುತ್ತಿತ್ತು, ಆದರೆ, ಈಗ 30 ತಾಸಿನಲ್ಲಿ ಭರ್ತಿಯಾಗುತ್ತಿವೆ. ಗೊರೂರಿನಿಂದ 500 ಮೀ.ವ್ಯಾಸದ ಪೈಪ್‍ಅನ್ನು ಅಳವಡಿಸಲಾಗಿದೆ. ಪೈಪ್ ಅಳವಡಿಕೆ ಯಶಸ್ವಿಯಾಗಿದ್ದು, ಮೊದಲ ಎರಡು ದಿನ ನೀರು ಸರಾಗವಾಗಿ ಹರಿದು ಬಂದಿದೆ. ಆದರೆ, ನಾಲ್ಕನೇ ದಿನ ಪೈಪ್ ಒಡೆದು ನೀರು ಚಿಮ್ಮಿದೆ. ಹೀಗಾಗಿ ಎರಡು ದಿನ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವಿಳಂಬವಾಯಿತು. ಈಗ ಕಾಮಗಾರಿ ನಡೆದಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸದಸ್ಯ ಸುರೇಶ್ ಕುಮಾರ್ ಆರಂಭದಿಂದಲೂ ನಗರದ ಅಭಿವೃದ್ಧಿಗೆ ವಿರೋಧಿಯಾಗಿದ್ದಾರೆ. ಅಧಿಕಾರಿಗಳಿಗೆ ದೂರವಾಣಿ ಮೂಲಕ ಹೆದರಿಸುವುದು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದೇ ನಿತ್ಯ ಕೆಲಸವಾಗಿದೆ’ ಎಂದು ತಿರುಗೇಟು ನೀಡಿದರು.

‘ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಅಮೃತ್ ಯೋಜನೆ ಕಾಮಗಾರಿ ಶೇ 60 ರಷ್ಟು ಪೂರ್ಣಗೊಂಡಿದೆ. 18 ಕಿ.ಮೀ.ನಲ್ಲಿ 14 ಕಿ.ಮೀ. ಪೈಪ್‍ಗಳನ್ನು ಜೋಡಿಸಲಾಗಿದೆ. ಜಾಕ್‌ವೆಲ್‌ ಕಾಮಗಾರಿ ಬಾಕಿ ಇದ್ದು, ಭೂಮಿ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಸುರೇಶ್‌ ಮಾಹಿತಿ ಇಲ್ಲದೆ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಅಧಿಕಾರಿಗಳ ಮೇಲೆ ದರ್ಪ, ಲಂಚ, ದಬ್ಬಾಳಿಕೆ ಮೂಲಕ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂಬ ಹಂಬಲ ನನಗಿಲ್ಲ. ಸಹೋದರ ಶಾಸಕ ಎಂಬ ಅಹಂನಿಂದ ಸಮಾಜ ಸೇವೆ ಮಾಡುತ್ತಿಲ್ಲ. ಸುರೇಶ್‍ಕುಮಾರ್ ಯಾರ ಬಗ್ಗೆಯಾದರೂ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಲೀಲಾವತಿ ವಾಸು, ಸದಸ್ಯರಾದ ಗೋಪಾಲ್, ಮಹೇಶ್ ಹಾಗೂ ಶ್ರೇಯಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT