ಗುರುವಾರ , ಜೂನ್ 24, 2021
27 °C
ಕರ್ನಾಟಕ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದವರೆಗೂ

ರಾಯಚೂರು: ಕೇಂದ್ರದ ನೀತಿಗಳ ವಿರುದ್ಧ ಟ್ರ್ಯಾಕ್ಟರ್‌ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಹಾಗೂ ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ರೈತರು ಮಂಗಳವಾರ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿ ಗಮನ ಸೆಳೆದರು.

ಸಂಯುಕ್ತ ಹೋರಾಟ ಕರ್ನಾಟಕ ಘಟಕದಿಂದ ಆಯೋಜಿಸಿದ್ದ ರ‍್ಯಾಲಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಠಮಾರಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ, ಘೋಷಣೆಗಳನ್ನು ಕೂಗಿದರು. ರ‍್ಯಾಲಿ ಉದ್ದಕ್ಕೂ ವಾದ್ಯಮೇಳವು ಜೊತೆಗಿತ್ತು. ಜನಜಾಗೃತಿ ಮೂಡಿಸುವ ಜೊತೆಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಕಚೇರಿಯಿಂದ ಆರಂಭವಾದ ರ‍್ಯಾಲಿ ನೇತಾಜಿ ವೃತ್ತ, ಸೂಪರ್‌ ಬಜಾರ್‌, ತೀನ್‌ ಕಂದಿಲ್‌, ಏಕ್‌ಮಿನಾರ್‌ನಿಂದ ಡಾ.ಬಿ.ಆರ್‌.ವೃತ್ತವನ್ನು ತಲುಪಿತು.

ದೆಹಲಿಯ ಗಡಿಗಳಲ್ಲಿ ರೈತರು ಕಳೆದ ವರ್ಷ ನವೆಂಬರ್‌ 26 ರಿಂದ ಹಗಲಿರುಳು ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ 60 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದರೂ ಸರ್ಕಾರ ತನ್ನ ನಿಲುವು ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಕೂಡಲೇ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮೇಲಾದರೂ ಕಾಯ್ದೆಗಳನ್ನು ಹಿಂಪಡೆಯುವ ಪ್ರಕ್ರಿಯೆ ಮಾಡಬೇಕು. ಕಾರ್ಮಿಕರ ವಿರೋಧಿ ಕಾನೂನು ತೆಗೆದುಹಾಕಬೇಕು. ಕೋವಿಡ್‌–19 ಲಾಕ್‌ಡೌನ್‌ ಅವಧಿಯಲ್ಲಾದ ಆರ್ಥಿಕ ಹಾನಿಯನ್ನು ಸರಿದೂಗಿಸಲು ಆರ್ಥಿಕ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ಘಟಕದ ಕೆ.ಜಿ.ವೀರೇಶ, ಡಿ.ಎಸ್‌.ಶರಣಬಸವ, ಮಾರೆಪ್ಪ ಹರವಿ, ರಾಮಣ್ಣ ಎಂ., ಬಸವರಾಜ ಗಾರಲದಿನ್ನಿ, ಖಾಜಾ ಅಸ್ಲಂ, ಚನ್ನಬಸವ ಜಾನೇಕಲ್‌, ಪ್ರವೀಣರೆಡ್ಡಿ ಗುಂಜಳ್ಳಿ, ಜಿಂದಪ್ಪ, ಮಹೇಶ ಚಿಕಲಪರ್ವಿ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು