ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವಾಹನ ದಟ್ಟಣೆ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

ನಗರ ಬೆಳವಣಿಗೆಯೊಂದಿಗೆ ಹೆಚ್ಚುತ್ತಿವೆ ವಾಹನಗಳು
Last Updated 8 ಮಾರ್ಚ್ 2021, 5:07 IST
ಅಕ್ಷರ ಗಾತ್ರ

ರಾಯಚೂರು: ನಗರದ ವಿವಿಧೆಡೆ ವಾಹನಗಳ ದಟ್ಟಣೆ ಸಮಸ್ಯೆ ವಾರದ ಆರಂಭ, ಕೆಲವು ಸಭೆ-ಸಮಾರಂಭ ಹಾಗೂ ಹಬ್ಬದ ದಿನಗಳಲ್ಲಿ ಮಾತ್ರ ಕಾಣುತ್ತಿತ್ತು. ಈಗ ಪ್ರತಿನಿತ್ಯವೂ ವಾಹನದಟ್ಟಣೆ ಸಮಸ್ಯೆ ಆಗಿದೆ.

ನಗರ ಮಧ್ಯಭಾಗದಲ್ಲಿರುವ ತೀನ್ ಕಂದೀಲ್, ಬಸವನ ಬಾವಿ ಚೌಕ್, ಪಟೇಲ್ ವೃತ್ತ, ಚಂದ್ರಮೌಳೇಶ್ವರ ಸರ್ಕಲ್, ರೈಲ್ವೆ ನಿಲ್ದಾಣದ ಎದುರು ವಾಹನ ದಟ್ಟಣೆ ಸಮಸ್ಯೆ ಸಾಮಾನ್ಯವಾಗಿತ್ತು. ಈಗ ಪ್ರತಿ ವೃತ್ತದಲ್ಲೂ ವಾಹನ ದಟ್ಟಣೆ ಸಮಸ್ಯೆ ಬೆಳಿಗ್ಗೆಯಿಂದ ರಾತ್ರಿವರೆಗೂ ಮುಂದುವರೆದಿದೆ.

ಕೇಂದ್ರ ಬಸ್ ನಿಲ್ದಾಣದ ಎದುರು, ರೈಲ್ವೆ ನಿಲ್ದಾಣದ ಎದುರು, ಸೂಪರ್ ಮಾರ್ಕೆಟ್ ಸೇರಿದಂತೆ ಕೆಲವು ಕಡೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮಗಳಾಗಿಲ್ಲ. ಇದೀಗ ಈ ಸಮಸ್ಯೆ ವಿಪರೀತ ಹಂತಕ್ಕೆ ತಲುಪಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಒಟ್ಟಾಗಿ ತುರ್ತಾಗಿ ಯೋಜಿಸಬೇಕಿದೆ.

ಬಡಾವಣೆಗಳ ಕಿರಿದಾದ ರಸ್ತೆಗಳಲ್ಲಿ ಸೀಮಿತವಾಗಿದ್ದ ವಾಹನದಟ್ಟಣೆ ಸಮಸ್ಯೆಯು ರಾಷ್ಟ್ರೀಯ ಹೆದ್ದಾರಿಯಲ್ಲೂ ಎದ್ದು ಕಾಣುತ್ತಿದೆ.

ಸಂಚಾರ ಪೊಲೀಸರು ವಾಹನಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಸಮಸ್ಯೆಗೆ ಕಾರಣಗಳು: ನಗರದೊಳಗಿನ ಕಿರಿದಾದ ರಸ್ತೆಗಳು ಸಮಸ್ಯೆಗೆ ಮೂಲ ಕಾರಣ. ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ವಾಹನಗಳ ಸಂಖ್ಯೆ ಪ್ರತಿವರ್ಷ ಸಾವಿರಾರು ಸೇರ್ಪಡೆಯಾಗುತ್ತಿವೆ. ರಸ್ತೆಗಳ ವಿಸ್ತರಣೆ ಆಗುತ್ತಿಲ್ಲ. ಮಾಸ್ಟರ್‌ ಪ್ಲ್ಯಾನ್‌ ಜಾರಿಯಾಗಿಲ್ಲ. ನಗರಸಭೆ ಅಧಿಕಾರಿಗಳು ಮತ್ತು ವಾರ್ಡ್‌ ಸದಸ್ಯರ ಮಧ್ಯೆ ಏರ್ಪಟ್ಟಿರುವ ಮನಸ್ತಾಪದಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಸಾಮಾನ್ಯ ಉದ್ದೇಶಕ್ಕಾಗಿ ಆಯ್ಕೆಯಾದ ವಾರ್ಡ್‌ ಸದಸ್ಯರು ಹಾಗೂ ನಿಯಮಾನುಸಾರ ಕಾಮಗಾರಿ ಮಾಡಿಸಬೇಕಿರುವ ಅಧಿಕಾರಿಗಳು ಮೂಲ ಉದ್ದೇಶ ಮರೆತಿದ್ದಾರೆ. ಸ್ವಜನ ಪಕ್ಷ‍ಪಾತ, ಒಳಗೊಳಗೆ ಒಪ್ಪಂದ ಮಾಡಿಕೊಂಡು ಜನಹಿತ ಬಲಿಕೊಡಲಾಗುತ್ತಿದೆ. ಮಚ್ಚಿಬಜಾರ್‌ ರಸ್ತೆ ವಿಸ್ತರಣೆ ಕಾಮಗಾರಿ ಸ್ಥಗಿತವಾಗಿರುವುದು ಇದಕ್ಕೊಂದು ನಿರ್ದಶನ. ಇದೇ ರೀತಿ ನಗರದ ಅನೇಕ ಕಡೆ ರಸ್ತೆ ವಿಸ್ತರಣೆ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

‘ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸುವ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜನಾನುಕೂಲಕ್ಕಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿದ್ದರೆ ಬೈಪಾಸ್‌ ರಸ್ತೆ ಈಗಾಗಲೇ ಮುಗಿದಿರಬೇಕಿತ್ತು. ವೈಯಕ್ತಿಕ ಹಿತಾಸಕ್ತಿ ಹಾಗೂ ಸಿಮೀತ ಉದ್ದೇಶಕ್ಕೆ ಮಹತ್ವ ನೀಡುತ್ತಿರುವುದರಿಂದ ರಾಯಚೂರಿನ ಜನರು ಅನುಭವ ಸಂಕಷ್ಟಗಳು ಪರಿಹಾರವಾಗುತ್ತಿಲ್ಲ’ ಎನ್ನುತ್ತಾರೆ ಗಂಗಾನಿವಾಸ್‌ ಕಾಲೋನಿಯ ಚಂದ್ರು ಯಕ್ಲಾಸಪುರ.

ಒತ್ತುವರಿ ತೆರವಿಲ್ಲ!: ರಸ್ತೆ ಅತಿಕ್ರಮಣಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವ ಕಾರ್ಯ ಯುದ್ದೋಪಾದಿಯಲ್ಲಿ ನಡೆಯಬೇಕಿದೆ. ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT