‘ಶೆಡ್ ತೆರವು ಆದೇಶ ಹಿಂಪಡೆಯಲಿ’

ರಾಯಚೂರು: ನಗರದ ಚಂದ್ರಬಂಡಾ ರಸ್ತೆಯ ಆಶ್ರಯ ಕಾಲನಿಯ ಬಡವರ ಶೆಡ್ ತೆರವುಗೊಳಿಸುವ ಆದೇಶ ಹಿಂಪಡೆದು ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಟ್ರೇಡ್ ಯುನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಆಶ್ರಯ ಕಾಲನಿಯಲ್ಲಿ ಸೋಮವಾರ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.
1990-91ರಲ್ಲಿ 53 ಎಕರೆ ಭೂಮಿಯನ್ನು ಸರ್ಕಾರ ಖರೀದಿಸಿ ಸರ್ವೆ ನಂಬರ್ 572 , 573 , 574 ರಲ್ಲಿ 17 ಎಕರೆ 01 ಗುಂಟೆ ಭೂಮಿಯಲ್ಲಿ 514 ನಿವೇಶನಗಳನ್ನು ರಚನೆ ಮಾಡಿ. ಸರ್ವೆ ನಂಬರ್ . 570/2 ರಲ್ಲಿ ಹಾಗೂ 570/3 ರಲ್ಲಿ ಒಟ್ಟು 5 ಎಕರೆ ಭೂಮಿಯಲ್ಲಿ 150 ನಿವೇಶನಗಳು ಸೇರಿ ಒಟ್ಟು 664 ನಿವೇಶನಗಳು ರಚನೆ ಮಾಡಿತ್ತು. ಅಲ್ಲಿ ಶ್ರೀಮಂತರು ವಾಸವಾಗಿದ್ದರು. ಆದರೆ ಮೂಲಸೌಕರ್ಯ ವಿರದ ಕಾರಣ ಬಿಟ್ಟು ಹೋದರು. ಆನಂತರ ಬಡವರು, ಆಟೋ ಚಾಲಕರು, ಕೂಲಿಕಾರ್ಮಿಕರು ವಾಸವಾಗಿದ್ದಾರೆ.
ಜಿಲ್ಲಾಡಳಿತ ನವೆಂಬರ್ 20, 2020 ಆದೇಶ ನೀಡಿ ಶೆಡ್ ಗಳ ತೆರವುಗೊಳಿಸಲು ಮುಂದಾಗಿದ್ದು ಖಂಡನೀಯ. ಕೂಡಲೇ ಹಿಂಪಡೆದು ಭೂ ಕಂದಾಯ ಕಾಯ್ದೆ ಸೆಕ್ಷನ್ 04 (ಸಿಸಿ) ಪ್ರಕಾರ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ನಗರದ ಮಾವನಕೆರೆ, ನಂದಿಶ್ವರ ಟೆಂಪಲ್ ಚರಂತಿ ಮಠ, ಸತ್ಯನಾಥ ಕಾಲನಿ, ಜಿಲ್ಲಾ ಕ್ರೀಡಾಂಗಣದ ಸುತ್ತಮುತ್ತ ಸೇರಿದಂತೆ ಹಲವೆಡೆ ನೂರಾರು ಕೋಟಿ ಬೆಲೆಬಾಳುವ ಜಮೀನು ಒತ್ತುವರಿಯಾಗಿದ್ದನ್ನು ಜಿಲ್ಲಾಡಳಿತ ತೆರವುಗೊಳಿಸದೇ ಬಡವರ ಶೆಡ್ ತೆರವಿಗೆ ಮುಂದಾಗಿದ್ದು ಸರಿಯಲ್ಲ.
30 ವರ್ಷಗಳಿಂದ ಹಳೆ ಆಶ್ರಯ ಕಾಲೋನಿಯಲ್ಲಿ ಜೀವನ ನಡೆಸುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ನಗರಸಭೆ ಆಡಳಿತ ಚುಕ್ಕಾಣಿ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಿಜೆಪಿ ದ್ವೇಷದ ರಾಜಕಾರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಅಮರೇಶ, ಸಿಪಿಐಎಂಎಲ್ ರೆಡ್‌ಸ್ಟಾರ್ ತಾಲ್ಲೂಕು ಕಾರ್ಯದರ್ಶಿ ರವಿ ದಾದಸ್, ಶೇಖ್ ಹುಸೇನ್‌ಬಾಷಾ, ನೂರಜಹಾನ್ ಮತ್ತಿತರರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.