ಗುರುವಾರ , ಆಗಸ್ಟ್ 22, 2019
27 °C

ತುಂಗಾನದಿಯಲ್ಲಿ ನೀರು: ಮಂತ್ರಾಲಯ ಮಠದಲ್ಲಿ ಸಂಭ್ರಮ

Published:
Updated:
Prajavani

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಸಮೀಪಿಸುತ್ತಿದ್ದಂತೆ, ಬರಿದಾಗಿದ್ದ ತುಂಗಭದ್ರಾ ನದಿಯಲ್ಲಿ ನೀರು ಹರಿಯಲಾರಂಭಿಸಿರುವುದರಿಂದ ಮಠದಲ್ಲಿ ಸಂಭ್ರಮ ಮನೆಮಾಡಿದೆ.

ಆರಾಧನೆಗೆ ಬರುವ ಭಕ್ತರಿಗೆ ತುಂಗಾ ಪುಣ್ಯಸ್ನಾನ ಸಾಧ್ಯವಾಗಿಸಲು ಜಲಾಶಯದಿಂದ ನೀರು ಹರಿಸುವಂತೆ ಮಠದಿಂದ ಸರ್ಕಾರಕ್ಕೆ ಈಚೆಗೆ ಪತ್ರ ಬರೆಯಲಾಗಿತ್ತು. ಇದೀಗ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರಿಂದ ₹2 ಲಕ್ಷ ಕ್ಯೂಸೆಕ್‌ನಷ್ಟು ನೀರು ಹೊರ ಬಿಡಲಾಗುತ್ತಿದೆ. ಮಂತ್ರಾಲಯಕ್ಕೆ ಸೋಮವಾರ ಬೆಳಿಗ್ಗೆ ನದಿಗೆ ನೀರು ತಲುಪುತ್ತಿದ್ದು, ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನದಿತೀರಕ್ಕೆ ತೆರಳಿ, ಪೂಜೆ ಸಲ್ಲಿಸಿದರು.

ಸ್ನಾನಘಟ್ಟದ ಮೆಟ್ಟಿಲುಗಳವರೆಗೂ ನದಿನೀರಿನ ಮಟ್ಟವಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಹೆಚ್ಚಳವಾದರೂ ರಾಯರ ಆರಾಧನೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ. ಮುಖ್ಯವಾಗಿ ಮಳೆ ಸುರಿಯುತ್ತಿಲ್ಲವಾದ್ದರಿಂದ ಯಾವುದೇ ಅನಾನುಕೂಲವಾಗುವುದಿಲ್ಲ ಎಂದು ಮಠದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ 14 ರಂದು ಸಪ್ತ ರಾತ್ರೋತ್ಸವ ಆರಂಭವಾಗುತ್ತದೆ. 16 ರಂದು ರಾಯರ ಪೂರ್ವರಾಧನೆ, 17 ರಂದು ಮಧ್ಯಾರಾಧನೆ ಹಾಗೂ 18 ರಂದು ಉತ್ತರಾರಾಧನೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶ, ವಿದೇಶಗಳಿಂದ ಬರುವ ಭಕ್ತರಿಗಾಗಿ ಪ್ರಸಾದ, ವಾಸ್ತವ್ಯಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

Post Comments (+)